Kannada Author & Books
K T Gatti
Buy original books by K T Gatti online at Pustaka Mane with home delivery across India.
ಕಾದಂಬರಿಕಾರ, ಭಾಷಾತಜ್ಞ, ಮತ್ತು ಸಮರ್ಥ ಪ್ರಾಧ್ಯಾಪಕರಾಗಿರುವ ಕೆ.ಟಿ. ಗಟ್ಟಿ ಅವರು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ತಂದೆ ಧೂಮಪ್ಪ ಗಟ್ಟಿ ಅವರು ಕೃಷಿಕರಾಗಿದ್ದರೂ ಯಕ್ಷಗಾನ ಕಲೆಗೆ ಅಪಾರ ಒಲವು ಹೊಂದಿದ್ದರು. ತಾಯಿ ಪರಮೇಶ್ವರಿ, ತುಳು ಮತ್ತು ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರಾಗಿದ್ದರು.
ಮೂಕಜ್ಜಿಯ ಕನಸುಗಳ ಕಲ್ಪನಾ ಲೋಕದಂತೆ, ಕನ್ನಡ ಸಾಹಿತ್ಯ ಲೋಕದಲ್ಲಿ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯನ್ನೂ, ಹೊಸ ವಸ್ತುಗಳನ್ನೂ ಪರಿಚಯಿಸಿದ ಲೇಖಕರಾಗಿದ್ದಾರೆ. ಸರಳ ನಿರೂಪಣೆ, ಆಕರ್ಷಕ ಶೈಲಿ, ಹೊಸ ದಿಕ್ಕುಗಳು, ಹೊಸ ವಿಚಾರಗಳು – ಇವೆಲ್ಲದರ ಸಮನ್ವಯದಿಂದ ಅವರು ಓದುಗರ ಮನಸ್ಸನ್ನು ಸೆಳೆದಿದ್ದಾರೆ.
ತಮ್ಮ ಹದಿನೇಳರ ಹರೆಯದಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ ಇವರು ಇಂಥಿಯೋಪಿಯಾದಲ್ಲಿ ಒಂಬತ್ತು ವರ್ಷ ಸೇರಿದಂತೆ ಒಟ್ಟು 25 ವರ್ಷ ಇಂಗ್ಲಿಷ್ ಪ್ರಾಧ್ಯಾಪಕರಾಗಿ ದುಡಿದವರು. 1957ರಿಂದ ಲೇಖನಿ ಹಿಡಿದು ಸಾಹಿತ್ಯ ಕೃಷಿ ಆರಂಭಿಸಿದ ಈ ಹಿರಿಯ ಕಥೆಗಾರ ನಿರಂತರವಾಗಿ ಕಥೆ, ಕಾದಂಬರಿ, ಕವನ, ಪ್ರಬಂಧ ಸಂಕಲನ, ನಾಟಕಗಳನ್ನು ಬರೆಯುತ್ತಲೇ ಬಂದವರು. ಇವರ ಮೊದಲ ಕಾದಂಬರಿ ‘ಶಬ್ದಗಳು’ 1973ರಲ್ಲಿ ಪ್ರಕಟವಾಯಿತು. ಈವರೆಗೆ 48 ಕಾದಂಬರಿಗಳು 5 ಕಥಾಸಂಕಲನಗಳು, 6 ಪ್ರಬಂಧ ಸಂಕಲನಗಳು, 22 ನಾಟಕಗಳು, 14 ಬಾನುಲಿ ನಾಟಕಗಳು, 2 ಕವನ ಸಂಕಲನಗಳಲ್ಲದೆ ಆತ್ಮಕಥೆ, ವ್ಯಕ್ತಿಚಿತ್ರ ಹಾಗೂ ಪ್ರವಾಸ ಕಥನಗಳನ್ನೂ ಬರೆದು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ಇವರದು. ತುಳು ಭಾಷೆಯಲ್ಲೂ ಒಂದು ಕವನ ಸಂಕಲನ ಹಾಗೂ ಕಾದಂಬರಿ ಪ್ರಕಟಿಸಿದ್ದಾರೆ. ಕೆ.ಟಿ.ಗಟ್ಟಿಯವರು ರಚಿಸಿದ 30 ಮಕ್ಕಳ ನಾಟಕಗಳು ಕನ್ನಡ ಅಂತರ್ಜಾಲ ಮ್ಯಾಗಜಿನ್ ನಲ್ಲಿ ಪ್ರಕಟಗೊಂಡಿವೆ. ಇತರ 10 ಮಕ್ಕಳ ನಾಟಕಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ.ಮಂಗಳೂರು ಆಕಾಶವಾಣಿಯಲ್ಲಿ ಹಲವು ಭಾಷಣಗಳು, 50 ಚಿಂತನಗಳು, ಕಥೆಗಳು ಪ್ರಸಾರವಾಗಿವೆ. ಕಳೆದ 40 ವರ್ಷಗಳಿಂದ ನಾಡಿನ ಹೆಸರಾಂತ ದಿನಪತ್ರಿಕೆಗಳು, ವಾರ ಹಾಗೂ ಮಾಸಪತ್ರಿಕೆಗಳಲ್ಲಿ ಇವರ ಹಲವಾರು ಲೇಖನಗಳು, ಕವನಗಳು ಪ್ರಕಟವಾಗಿವೆ. ಹೆಸರಿಗೆ ತಕ್ಕಂತೆ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿ ಕುಳ ಎನಿಸಿರುವ ಕೆ.ಟಿ.ಗಟ್ಟಿ ಅವರ ಒಟ್ಟು 16 ಕಾದಂಬರಿಗಳು ಸುಧಾ ವಾರಪತ್ರಿಕೆ ಒಂದರಲ್ಲೇ ಪ್ರಕಟವಾಗಿವೆ.