ವಿಶ್ವೇಶ್ವರ ಭಟ್ ಕನ್ನಡದ ಪತ್ರಕರ್ತರು, ಬರಹಗಾರರು, ಅಂಕಣಕಾರರು. ವಿಜಯ ಕರ್ನಾಟಕ ಮತ್ತು ಕನ್ನಡಪ್ರಭ ಕನ್ನಡ ಪತ್ರಿಕೆಗಳ ಹಾಗೂ ಸುವರ್ಣ ನ್ಯೂಸ್ ಸುದ್ದಿವಾಹಿನಿಯ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ೧೫ ಜನವರಿ ೨೦೧೬ರಂದು, ಪುನರಾರಂಭಿಸಿದ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶ್ವವಾಣಿ ಪತ್ರಿಕೆಯ ಮಾತೃ ಸಂಸ್ಥೆಯಾದ ‘ವಿಶ್ವಾಕ್ಷರ ಮೀಡಿಯಾ ಪ್ರೈವೇಟ್ ಲಿಮಿಟೆಡ್’ನ ವ್ಯವಸ್ಥಾಪಕ ನಿರ್ದೇಶಕರೂ ಸಹ ಆಗಿದ್ದಾರೆ.
ವಿಶ್ವೇಶ್ವರ ಭಟ್ ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಮೂರೂರಿನವರು. ಬಿ.ಎಸ್ಸಿ ಮಾಡಿ, ಭೂಗರ್ಭಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡಿ, ಪತ್ರಿಕೋದ್ಯಮದಲ್ಲಿ (೪ ಚಿನ್ನದ ಪದಕ ದೊಂದಿಗೆ) ಎಂ.ಎ ಮಾಡಿದರು. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.
ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ‘ಅಸಿಸ್ಟೆಂಟ್ ಪ್ರೊಫೆಸರ್’ ಆಗಿ ಕೆಲವು ಸಮಯ ಕೆಲಸ ಮಾಡಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ (ಅನಂತ್ ಕುಮಾರ್) ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ. ಪತ್ರಕರ್ತರಾಗಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಮೊದಲು ಕೆಲಸ ಮಾಡಿದ್ದಾರೆ. ನಾಲ್ಕು ವರ್ಷ ಕನ್ನಡಪ್ರಭ ಪತ್ರಿಕೆಯಲ್ಲಿ ಉಪ-ಸಂಪಾದಕನಾಗಿ ಕಾರ್ಯನಿರ್ವಹಿಸಿ, ತದನಂತರ ೨೦೧೧ರಲ್ಲಿ ಪ್ರಧಾನ ಸಂಪಾದಕರಾಗಿ ಹುದ್ದೆ ವಹಿಸಿಕೊಂಡಿದ್ದರು. ವಿಜಯ ಕರ್ನಾಟಕ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. (೮ ಡಿಸೆಂಬರ್ ೨೦೧೦ರವರೆಗೆ). ೭ ಫೆಬ್ರುವರಿ ೨೦೧೧ರಿಂದ ಕನ್ನಡಪ್ರಭದಲ್ಲಿ ಪ್ರಧಾನ ಸಂಪಾದಕರಾಗಿದ್ದರು. ೨೦೧೦ರ ಕೊನೆಯಲ್ಲಿ, ವಿಜಯ ಕರ್ನಾಟಕದಿಂದ ಹೊರಬಂದ ಮೇಲೆ, ತಮ್ಮದೇ ಒಂದು ಬ್ಲಾಗ್ ಸಹ ಶುರು ಮಾಡಿದ್ದರು. ೧೫ ಜುಲೈ ೨೦೧೧ರಿಂದ ಸುವರ್ಣ ನ್ಯೂಸ್ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕರಾಗಿದ್ದರು. ೨೦೧೬ ಜನವರಿಯಲ್ಲಿ ವಿಶ್ವವಾಣಿ ಕನ್ನಡ ದಿನಪತ್ರಿಕೆಯನ್ನು ಇವರ ಸಂಪಾದಕತ್ವದಲ್ಲಿ ಮರುಪ್ರಾರಂಭಿಸಲಾಯಿತು. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜೊತೆ ಹದಿನಾಲ್ಕು ದಿನ ರಷ್ಯಾ, ಆಸ್ಟ್ರೇಲಿಯಾ, ಯುಕ್ರೇನ್, ಐಸ್ ಲ್ಯಾಂಡ್ನಲ್ಲಿ ಪ್ರವಾಸ ಮಾಡಿದ ಅನುಭವ ಸಹ ಇವರದು. ಇದುವರೆಗೂ, ಅವರು ಕನ್ನಡದಲ್ಲಿ 64 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.