ಡಾ. ಗಣೇಶ್ ಜಿ. ಎಂ., ಜನಿಸಿದ್ದು, ಬೆಳೆದಿದ್ದು, ಆಟವಾಡಿ ನಲಿದಿದ್ದು ಕತ್ತಲಗೆರೆ ಗ್ರಾಮದಲ್ಲಿ. ದಾಖಲೆಗಳ ಪ್ರಕಾರ, ನನ್ನ ಜನ್ಮದಿನ 1969ರ ಜನವರಿ 28. ಆದರೆ, ನಾನು ಇದುವರೆಗೂ ನನ್ನ ಜನ್ಮದಿನವನ್ನು ಆಚರಿಸಿಕೊಂಡ ನೆನಪಿಲ್ಲ, ಏಕೆಂದರೆ ಅದು ನನ್ನ ನಿಜವಾದ ಜನ್ಮದಿನವಲ್ಲ. ಶಾಲೆಗೆ ಸೇರಿದಾಗ, ಮೇಷ್ಟ್ರು ಅನುಕೂಲಕ್ಕೆ ತಕ್ಕಂತೆ ದಾಖಲಿಸಿದ ದಿನವೇ ಆವಾಗಿ ಬಿಟ್ಟಿತು. ಆ ಮೇಷ್ಟ್ರಿಗೆ ನನ್ನ ಪ್ರಣಾಮ. ನಮ್ಮದು ರೈತ ಕುಟುಂಬ. ತಂದೆ ಮಹಾದೇವಪ್ಪ, ತಾಯಿ ನೀಲಮ್ಮ. ಬಾಲ್ಯದಲ್ಲಿ ಪಾಠಪುಸ್ತಕಗಳಿಗಿಂತ ಗೋಲಿ, ಬುಗುರಿ, ಚಿನ್ನಿದಾಂಡು, ಲಗೋರಿ, ಕೊರ್ಚಿಬಿಲ್ಲೆ, ಮರಕೋತಿ ಆಟಗಳು ನನ್ನ ಜಗತ್ತು. ರಜೆ ಬಂದಾಗ, ದನಗಳನ್ನು ಕಾಯುವುದು ನನ್ನ ಜವಾಬ್ದಾರಿಯಾಗಿತ್ತು. ಗಂಡು-ಹೆಣ್ಣು ಭೇದವಿಲ್ಲದೆ, ಎಲ್ಲರೂ ಸೇರಿ ಕಲಿತ ಆ ದಿನಗಳು ಮರೆಯಲಾಗದ ನೆನಪು. ಹಸಿರು ಹೊತ್ತ ಭತ್ತದ ಗದ್ದೆಗಳು, ಗಾಳಿಗೆ ತಲೆದೂಗುವ ಕಬ್ಬಿನ ಹೊಲಗಳು, ತೆಂಗಿನ ತೋಟಗಳ ಮಧ್ಯೆ ಮಹೀಷಿಯ ಬೆನ್ನೇರಿದಾಗ ನಾನೇ ರಾಜನಾದಂತೆ ಅನಿಸುತ್ತಿತ್ತು. ಮಾವಿನ ಮರ, ಸೀಬೆ, ಬಾರೀಹಣ್ಣು, ಹತ್ತಿಹಣ್ಣು, ಕಾಕಿ ಹಣ್ಣು—ಇವುಗಳಿಗಾಗಿ ಓಡಿದರೂ, ದಣಿವೇ ಅನಿಸದು. ಅಂದಿನ ನದಿ, ಕೆರೆ, ಬಾವಿ, ಹಳ್ಳ, ಕಾಲುವೆ ಸದಾ ತುಂಬಿ ಹರಿಯುತ್ತವೆ; ಆದರೆ, ಈಗ ಊರಿನ ಚಿತ್ರಣ ತೀರಾ ಬೇರೆಯಾಗಿಹೋಗಿದೆ.
ಪ್ರಾಥಮಿಕ ಶಿಕ್ಷಣದ ಬಳಿಕ, ದಾವಣಗೆರೆಯ ಅನುಭವ ಮಂಟಪದಲ್ಲಿ ಪ್ರೌಢಶಾಲೆ ಪ್ರಾರಂಭಿಸಿತು. ಅದು ಇಂಗ್ಲಿಷ್ ಮಾಧ್ಯಮದ ಶಾಲೆ; ಏನು ಕಲಿತೆನೋ ನೆನಪಿಲ್ಲ, ಆದರೆ ಶ್ರದ್ಧೆ ಮತ್ತು ಶಿಸ್ತು ನನ್ನ ಜೀವನದ ಅಂಗವಾಗಿದವು. 10ನೇ ತರಗತಿಯಲ್ಲಿ ಮೊದಲಬಾರಿಗೆ ಪಾಸಾದಾಗ ಬೀದಿಯ ಹೆಂಗಸರು ಹುಬ್ಬೇರಿಸಿದರೆ, ನಾನಂತು ನಾಚಿಕೊಂಡೆ. ಶಿವಮೊಗ್ಗದ ಡಿ.ವಿ.ಎಸ್. ಕಾಲೇಜಿನಲ್ಲಿ ಪಿಯುಸಿ ಪೂರೈಸಿದ ಬಳಿಕ, ಬಿ.ಎ. ಪದವಿಗಾಗಿ ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನಲ್ಲಿ ಕನ್ನಡ ಆಯ್ಕೆಮಾಡಿ ವ್ಯಾಸಂಗ ಮಾಡಿದೆ. ಶಿಕ್ಷಕನಾಗಬೇಕೆಂಬ ಆಸೆ ಚಿಗುರೊಡೆದು, ದಾವಣಗೆರೆಯ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ. ಪದವಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಪೂರ್ಣಗೊಳಿಸಿ, ನಂತರ ಎಂ.ಇಡಿ. ಮತ್ತು ಧಾರವಾಡದ ಕನ್ನಡ ಎಂ.ಎ. ಪದವಿಗಳನ್ನು ಸಂಪಾದಿಸಿದೆ.
ಶಿಕ್ಷಕನಾಗಿ ನನ್ನ ಊರಿನ ಪ್ರೌಢಶಾಲೆಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದಾಗ, ಕಲಿಸುವ ಕಲೆಯ ಜೊತೆಗೆ ನಾನು ಕರಗಿಹೋದೆ. ವಿದ್ಯಾರ್ಥಿಗಳ ಪ್ರೀತಿ ನನ್ನನ್ನು ಶಿಕ್ಷಣ ಕ್ಷೇತ್ರದಲ್ಲಿ ಶಾಶ್ವತವಾಗಿ ನಿಲ್ಲುವಂತೆ ಮಾಡಿತು. ಕಲಿಯುವುದು, ಕಲಿಸುವುದು ನನ್ನ ಉಸಿರಾಯಿತು. 1994ರಲ್ಲಿ ನನ್ನ ಜೀವನದ ದಿಕ್ಕು ಬದಲಾಗಿದೆ. ಚಿಕ್ಕಮಗಳೂರಿನ ಎಂ.ಇ.ಎಸ್. ಎಂ.ಎಲ್.ಎಂ.ಎನ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಶಿಕ್ಷಕನಾಗಿ ಸೇವೆಗೆ ಸೇರಿದ ನಂತರ, ವೃತ್ತಿಯ ಜೊತೆಗೆ ಹಲವು ಪ್ರವೃತ್ತಿಗಳನ್ನು ಮೈಗೂಡಿಸಿಕೊಂಡೆನು. ಹೊಸ ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಿದ್ದೆ.
ಯುಜಿಸಿಯ ಎಫ್.ಐ.ಪಿ. ಯೋಜನೆಯಡಿ ಎರಡು ವರ್ಷ ಸಂಶೋಧನೆಗಾಗಿ ಶಿಷ್ಯವೇತನ ದೊರೆತು, 2007ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಶಿಕ್ಷಣಶಾಸ್ತ್ರದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದೆ. ನನ್ನ ಸಂಶೋಧನಾ ಪ್ರಬಂಧ: “ಪ್ರೌಢಶಾಲಾ ವಿದ್ಯಾರ್ಥಿಗಳ ಆಲಿಸುವಿಕೆ ಹಾಗೂ ಓದುವಿಕೆಯ ಗ್ರಹಣ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಚಟುವಟಿಕೆಗಳ ಸಾಫಲ್ಯ – ಒಂದು ಪ್ರಾಯೋಗಿಕ ಅಧ್ಯಯನ”.