Ganesh G M

Ganesh G M

ನಾನು ಡಾ. ಗಣೇಶ್ ಜಿ. ಎಂ. ಹುಟ್ಟಿದ್ದು, ಆಡಿದ್ದು, ನಲಿದದ್ದು ಕತ್ತಲಗೆರೆ ಗ್ರಾಮದಲ್ಲಿ. 28ನೇ ಜನವರಿ 1969 ನನ್ನ ಜನ್ಮದಿನವೆಂದು ದಾಖಲೆಗಳು ಹೇಳುತ್ತವೆ. ಆದರೆ ನನ್ನ ಜನ್ಮ ದಿನವನ್ನು ಆಚರಿಸಿಕೊಂಡ ನೆನಪಿಲ್ಲ.ಏಕೆಂದರೆ ಅದು ನನ್ನ ನಿಜ ಜನ್ಮ ದಿನವಲ್ಲ. ಶಾಲೆಗೆ ಸೇರಿದಂದು ಮೇಷ್ಟ್ರು ಅನುಕೂಲಕ್ಕೆ ಅವರೇ ಬರೆದು ಕೊಂಡದ್ದು. ಆ ಮೇಷ್ಟ್ರಿಗೆ ನನ್ನದೊಂದು ಸಲಾಂ. ನಮ್ಮದು ರೈತಾಪಿ ಕುಟುಂಬ. ತಂದೆ ಮಹಾದೇವಪ್ಪ, ತಾಯಿ ನೀಲಮ್ಮ.
ಬಾಲ್ಯದಲ್ಲಿ ಪಾಠಿ ಪುಸ್ತಕಗಳಿಗಿಂತ ಗೋಲಿ, ಬುಗುರಿ, ಚಿನ್ನಿದಾಂಡು, ಲಗೋರಿ, ಕೊರ್ಚಿಬಿಲ್ಲೆ, ಮರಕೋತಿ ಆಟ ಇವುಗಳ ಜೊತೆ ಕಲೆತದ್ದು, ಕಲಿತದ್ದು ಈಗಲೂ ಮನದಲ್ಲಿ ಮಾಸದಂತೆ ಬೆಚ್ಚಗೆ ಕುಳಿತಿವೆ. ರಜೆ ಬಂತೆಂದರೆ ದನಗಳನ್ನು ಕಾಯುವುದು ನನ್ನ ಕಾಯಕವಾಗಿತ್ತು. ಮೇಲು ಕೀಳು ಭಾವನೆಗಳಿಲ್ಲದೆ, ಗಂಡು ಹೆಣ್ಣು ಭೇದವಿಲ್ಲದೆ ಕೂಡಿ ಕಲಿತ ಆ ದಿನಗಳು ಅವಿಸ್ಮರಣೀಯ… ಹಸಿರನ್ನು ಹೊತ್ತು ಮಲಗಿದ್ದ ಭತ್ತದ ಗದ್ದೆಗಳು, ಆಕಾಶಕ್ಕೆ ಮುಖಮಾಡಿದ್ದ ತೆಂಗಿನ ತೋಟಗಳು, ಗಾಳಿಗೆ ತಲೆದೂಗುತ್ತ ಸೂಲಂಗಿಯನ್ನು ತೊಟ್ಟ ಕಬ್ಬಿನ ಹೊಲಗಳ ನಡವೆ ಮಹೀಷಿಯ ಬೆನ್ನೇರಿ ಸಾಗುತ್ತಿದ್ದರೆ….ರಾಜಾಧಿರಾಜನೇ ಆಗಿರುತ್ತಿದ್ದೆ. ಮಾವಿನ ಮರ, ಸೀಬೆಮರ, ಬಾರೀಹಣ್ಣು, ಹತ್ತಿಹಣ್ಣು, ಕಾಕಿ ಹಣ್ಣು… ಹೀಗೆ ನಾನಾ ಹಣ್ಣುಗಳನ್ನು ಹುಡುಕಿಕೊಂಡು ಸುತ್ತುತ್ತಿದ್ದ ನನ್ನ ಕಾಲುಗಳಿಗೆ ದಣಿವೇ ಆಗುತ್ತಿರಲಿಲ್ಲ. ನದಿ, ಕೆರೆ, ಬಾವಿ, ಹಳ್ಳ, ಕಾಲುವೆ…ಸದಾ ತುಂಬಿ ಹರಿಯುತ್ತಿದ್ದವು. ಆದರೆ…. ಈಗ ನನ್ನ ಊರು ಮೊದಲಿನಂತಿಲ್ಲ.
ಪ್ರಾಥಮಿಕ ಶಾಲೆ ಕಲಿತ ನಂತರ ದಾವಣಗೆರೆಯ ಅನುಭವ ಮಂಟಪದಲ್ಲಿ ಪ್ರೌಢಶಾಲೆಗೆ ಸೇರಿದೆ. ಅದುವೇ ಇಂಗ್ಲೀಷ್ ಮಾಧ್ಯಮದ ಶಾಲೆ. ಏನು ಕಲಿತೆನೋ ಒಂದೂ ನೆನಪಿಲ್ಲ. ಆದರೆ ಜೀವನದಲ್ಲಿ ಶ್ರದ್ಧೆ ಹಾಗೂ ಶಿಸ್ತುನ್ನು ಮೈಗೂಡಿಸಿಕೊಂಡೆನು. 10ನೇ ತರಗತಿಯನ್ನು ಮೊದಲಬಾರಿಗೆ ಪಾಸು ಮಾಡಿದ್ದಕ್ಕೆ ಬೀದಿಯ ಹೆಂಗಸರು ಹುಬ್ಬೇರಿಸಿದ್ದು ನನ್ನನ್ನು ನಾಚುವಂತೆ ಮಾಡಿತು.
ನಂತರ ಶಿವಮೊಗ್ಗೆಯ ಡಿ.ವಿ.ಎಸ್., ಕಾಲೇಜಿನಲ್ಲಿ ಪಿಯುಸಿ ಸೇರಿದೆ. ಒಂದಿಷ್ಟು ಓದುವ ಜವಾಬ್ದಾರಿ ಬಂತು. ಕಬ್ಬಿಣದ ಕಡಲೆಯಾಗಿದ್ದ ಇಂಗ್ಲೀಷನ್ನು ಕುಟ್ಟಿ ಪುಡಿಮಾಡಿದೆ. ನಂತರ ಬಿ.ಎ., ಪದವಿಯನ್ನು ಸಿರಿಗೆರೆಯ ಎಂ.ಬಿ.ಆರ್., ಕಾಲೇಜಿನಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ವ್ಯಾಸಂಗ ಮಾಡಿದೆ.
ಶಿಕ್ಷಕನಾಗಬೇಕೆಂಬ ಆಸೆ ಚಿಗುರೊಡೆಯಿತು. ಹೀಗಾಗಿ ದಾವಣಗೆರೆಯ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ., ಪದವಿಯನ್ನು ಅತ್ಯುನ್ನತ ಶ್ರೇಣಿಯಲ್ಲಿ ಪೂರೈಸಿದೆ. ಮರು ವರ್ಷವೇ ಎಂ.ಇಡಿ., ಪದವಿಯನ್ನು ನಂತರದಲ್ಲಿ ಧಾರವಾಡದಲ್ಲಿ ಕನ್ನಡ ಎಂ.ಎ., ಪದವಿಯನ್ನೂ ಪಡೆದೆನು.
ಶಿಕ್ಷಕನಾಗಿ ಎರಡು ವರ್ಷ ನನ್ನ ಊರಿನ ಪ್ರೌಢಶಾಲೆಯಲ್ಲಿ ಕಲಿಸಲು ಆರಂಭಿಸಿದೆ. ಕಲಿಸುವ ಕಲೆ ಕರಗತವಾಗುತ್ತಾ….ಕರಗಿ ಹೋದೆನು. ಅಂದು ವಿದ್ಯಾರ್ಥಿಗಳು ತೋರಿದ ಪ್ರೀತಿಯೇ …… ನಾನಿಂದು ಶಿಕ್ಷಣ ಕ್ಷೇತ್ರದಲ್ಲಿ ಶಾಶ್ವತವಾಗಿ ನಿಲ್ಲುವ ನೀತಿಯಾಯಿತು. ಕಲಿಯುವುದು…ಕಲಿಸುವುದು ಜೀವನದ ಉಸಿರಾಯಿತು.
1994 ನನ್ನ ಜೀವನದ ದಿಕ್ಕನ್ನು ಬದಲಾಯಿಸಿತು. ಚಿಕ್ಕಮಗಳೂರಿನ ಎಂ.ಇ.ಎಸ್., ಎಂ.ಎಲ್.ಎಂ.ಎನ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಶಿಕ್ಷಕನಾಗಿ ಸೇವೆಗೆ ಸೇರಿದೆ. ವೃತ್ತಿಯ ಜೊತೆಯಲ್ಲಿ ಹಲವು ಪ್ರವೃತ್ತಿಗಳನ್ನು ಮೈಗೂಡಿಸಿಕೊಂಡೆನು. ಹೊಸ ಹೊಸ ಪ್ರಯೋಗಗಳಿಗೆ ನನ್ನನ್ನು ನಾನೇ ತೊಡಗಿಸಿಕೊಂಡೆನು.
ಯುಜಿಸಿಯ ಎಫ್.ಐ.ಪಿ. ಯೋಜನೆಯಲ್ಲಿ ಎರಡು ವರ್ಷ ಸಂಶೋಧನೆಗಾಗಿ ಶಿಷ್ಯವೇತನ ಲಭಿಸಿತು. ಹೀಗಾಗಿ 2007 ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ., ಪದವಿಯನ್ನು ಶಿಕ್ಷಣ ಶಾಸ್ತ್ರದಲ್ಲಿ ಪಡೆದೆನು. “ಪ್ರೌಢಶಾಲಾ ವಿದ್ಯಾರ್ಥಿಗಳ ಆಲಿಸುವಿಕೆ ಹಾಗೂ ಓದುವಿಕೆಯ ಗ್ರಹಣ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಚಟುವಟಿಕೆಗಳ ಸಾಫಲ್ಯ – ಒಂದು ಪ್ರಾಯೋಗಿಕ ಅಧ್ಯಯನ” ಇದು ನಾನು ಮಂಡಿಸಿದ ಸಂಶೋಧನಾ ಪ್ರಬಂಧ.

Books By Ganesh G M