ಕವಯತ್ರಿ ವಿದ್ಯಾ ಭರತನಹಳ್ಳಿಯವರು ಕಥಾ ಪ್ರಪಂಚಕ್ಕೆ ಕಾಲಿರಿಸಿದ್ದು ಇತ್ತೀಚೆಗೆ. ನೋಡನೋಡುತ್ತ ಮೂಡಿಬಂದ ಹದಿಮೂರು ಕಥೆಗಳ ಸಂಕಲನ ‘ಬೇಸೂರ್’. ರೋಚಕತೆಯ ಮೋಹಕ್ಕೆ ಬೀಳದಿದ್ದರೂ ಶೈಲಿ ಚುರುಕಾಗಿದೆ. ವಸ್ತು ಮತ್ತು ಪಾತ್ರಗಳ ಆಯ್ಕೆ ತುಂಬಾ ಅಥೆಂಟಿಕ್ ಆಗಿದೆ. ಕಥೆಗಾರನಿಗೆ ಅಗತ್ಯವಾದ ನಿರ್ಲಿಪ್ತತೆ ವಿದ್ಯಾರಿಗೆ ಸಿದ್ದಿಸಿದೆ. ಕೆಲವು ಕತೆಗಳಂತೂ ಹೃದಯದಾಳವ ಹೊಕ್ಕು ಬಗೆಯುವಂತಿವೆ. ಗಂಡನೆಂಬ ಪ್ರಾಣಿಯ ಕ್ರೌರ್ಯಕ್ಕೆ ಸಿಕ್ಕು. ಹಿಚುಕಲ್ಪಟ್ಟು ಮಸಣ ಸೇರುವ ‘ಆಯಿ’ಯ ಕಮಲಾಕ್ಷಿ, ಅಂಥದೇ ಇನ್ನೊಬ್ಬ ಗಂಡನನ್ನು ಧಿಕ್ಕರಿಸಿ ಹೊರಬಂದು ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವ ‘ಹೇಳೆ ಮೇದಿನಿ’ಯ ಮೇದಿನಿ. ಸ್ತ್ರೀ ಹೃದಯದ ಉದಾತ್ತತೆ ಮೆರೆಯುವ ‘ಗಿಂಡಿ ತುಂಬಿದ ಹಾಲಿ’ನ ಶಾಂತಲೆ. ತನ್ನ ಉಕ್ಕುವ ಪ್ರತಿಭೆಯನ್ನು ಸದಾ ಸಿಟ್ಟು, ಸೆಡವು, ಕೊಂಕು ಮಾತುಗಳಿಂದ ಮುರುಟಿಸುವ ಗಂಡನನ್ನು ಕಟ್ಟಿಕೊಂಡು ವಿಲ ವಿಲ ಒದ್ದಾಡುವ ವರ್ಷಾ ದೇಶಪಾಂಡೆ ಮುಂತಾದ ಜೀವಗಳು ಕಥೆ ಓದಿ ಮುಗಿಸಿಯಾದಮೇಲೂ ಬಹುಕಾಲ ನೆನಪಿನಲ್ಲಿ ಸ್ಥಾಯಿಯಾಗುತ್ತವೆ. ಮನ ಕದಡುತ್ತವೆ. ಚಿಂತನೆಗೆ ಹಚ್ಚುತ್ತವೆ. ವಸ್ತುವಿನ ಗಟ್ಟಿತನದಿಂದ, ಶೈಲಿಯ ದಟ್ಟತೆಯಿಂದ, ಜೀವನಾನುಭವದ ಸಮೃದ್ಧತೆಯಿಂದ ವಿದ್ಯಾ ಭರತನಹಳ್ಳಿಯವರ ‘ಬೇಸೂರ್’ ಕಥಾ ಸಂಕಲನ ಸಾಹಿತ್ಯ ಲೋಕದಲ್ಲಿ ತನ್ನದೇ ಒಂದು ಛಾಪು ಮೂಡಿಸುತ್ತದೆ.