ಲೇಖಕ, ಅನುವಾದಕ ಟಿ.ಎಸ್. ರಘುನಾಥ್ ಅವರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ತಾಲೂಕಿನ ತುರುವನೂರಿನವರು. 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು, ನಗರದ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 1985ರಿಂದ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜು ಮಲ್ಲೇಶ್ವರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಂತರ ಸ್ನಾತಕೋತ್ತರ ಸ್ಥಾಪಕ ಸಂಯೋಜಕರಾಗಿ ಕಾರ್ಯನಿರ್ವಹಿಸಿ 2014ರಲ್ಲಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆ ಬಹು ಮುಖ್ಯವಾಗಿ ಕಥನ ಪರಂಪರೆ ಮತ್ತು ಸಂಶೋಧನಾ ಅಧ್ಯಯನಗಳಲ್ಲಿ ಆಸಕ್ತಿ ಹೊಂದಿರುವ ಅವರು ಪಾಶ್ಚಾತ್ಯ ಸಾಹಿತ್ಯ ಅದರಲ್ಲೂ ರಷ್ಯನ್ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.
ನಿವೃತ್ತಿಯ ನಂತರ ಅನುವಾದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ‘ಚೆಕೋವ್ ನ ಲಾಟರಿ ಟಿಕೆಟ್ ಮತ್ತು ಇತರ ಕಥೆಗಳು ಕೃತಿಯನ್ನು ಪ್ರಕಟಿಸಿದ್ದು, ದಸ್ತೊವಸ್ಕಿ ಮಹಾಕಾದಂಬರಿಗಳು ಮತ್ತು ಯುರೋಪಿಯನ್ ಕೃತಿಗಳ ಅನುವಾದದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಮಾರ್ಕೆಜ್ ಕಾದಂಬರಿಯ ಅನುವಾದ, ಮತ್ತು ಕೊಲೆಯ ವೃತ್ತಾಂತ ಮತ್ತು ರಷ್ಯನ್ ಕಥೆಗಳ ಅನುವಾದಗಳು ಪ್ರಕಟಗೊಂಡಿವೆ. 2020ನೇ ಸಾಲಿನಲ್ಲಿ ಮಾರ್ಕೆಸ್ ನ ಆತ್ಮವೃತ್ತಾಂತದ ಕನ್ನಡಾನುವಾದ ‘ಬದುಕಿರುವುದೇ ಕಥೆ ಹೇಳಲಿಕ್ಕೆ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ.