T R Anantharamu

T R Anantharamu

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ. ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ಜೊತೆಗೆ ಬೆಂಗಳೂರಿನ ಭೂ ವಿಜ್ಞಾನ ಸರ್ವೇಕ್ಷಣಾ ಸಂಸ್ಥೆಯಲ್ಲಿ ಭೂ ವಿಜ್ಞಾನಿಯಾಗಿ ನಿವೃತ್ತರಾಗಿದ್ದಾರೆ.

ವಿಜ್ಞಾನದ ವಿಷಯಕ್ಕೆ ಸಂಬಂಧಿಸಿದಂತೆ ಸುಮಾರು 800ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಅನಂತರಾಮು, ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಸ್ವಂತ ರಚನೆಗಳು 59, ಅನುವಾದಿತ ಕೃತಿಗಳು- 13, ಸಂಪಾದಿತ ಕೃತಿಗಳು- 33, ಇತರರೊಡನೆ ಸಂಪಾದಿಸಿದ ಕೃತಿಗಳು- 8, ಮಕ್ಕಳ ಸಾಹಿತ್ಯ ಸಂಪಾದಿತ ಕೃತಿಗಳು -3 ಸೇರಿದಂತೆ ಒಟ್ಟು  116 ಕೃತಿಗಳನ್ನು ಪ್ರಕಟಿಸಿದ್ದಾರೆ. ನವಕರ್ನಾಟಕದ ‘ಜ್ಞಾನ-ವಿಜ್ಞಾನ’ ಕೋಶದ ಸಹ ಸಂಪಾದಕರು, ‘ವಿಜ್ಞಾನ ತಂತ್ರಜ್ಞಾನ ನಿಘಂಟು’ ಕೃತಿಗಳ ಸಂಪಾದಕರು ಆಗಿದ್ದು, ‘ಹಿಮದ ಸಾಮ್ರಾಜ್ಯದಲ್ಲಿ’,  ‘ಕರ್ತಾರನಿಗೊಂದು ಕಿವಿಮಾತು, ಮತ್ತು ‘ಪಶ್ಚಿಮ ಮುಖ’ ಕೃತಿಗಳಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪುಸ್ತಕ ಬಹುಮಾನ ಲಭಿಸಿದೆ. ‘ದೈತ್ಯ ಪ್ರತಿಭೆಗಳ ಹೆಗಲ ಮೇಲೆ’  ಕೃತಿಗಾಗಿ 2012-13ನೇ ಸಾಲಿನಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಶ್ರೇಷ್ಠ ಲೇಖಕ ಪ್ರಶಸ್ತಿ ಲಭಿಸಿದೆ.

ಕರ್ನಾಟಕ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯಿಂದ 2008ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಸಂದಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ 2011ರ ಅನುವಾದ ಪುರಸ್ಕಾರ ಮತ್ತು ಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಇಲಾಖೆಯ ವಿಷನ್ ಗ್ರೂಪ್ ನಿಂದ 2011ರ ಶ್ರೇಷ್ಠ ವಿಜ್ಞಾನ ಸಂವಹನಕಾರ ಪ್ರಶಸ್ತಿ ಲಭಿಸಿದೆ. ವಿಜ್ಞಾನ ಬರಹಗಳಿಗಾಗಿ 2015ರಲ್ಲಿ ತುಮಕೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. 2017ರಲ್ಲಿ ಶಿವಮೊಗ್ಗ ಕರ್ನಾಟಕ ಸಂಘದಿಂದ ಜೀವಮಾನ ಸಾಧನೆಗಾಗಿ ‘ಡಾ. ಶಿವರಾಮ ಕಾರಂತ ವಿಜ್ಞಾನ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.

Books By T R Anantharamu