Swami Purushottamananda

Swami Purushottamananda

ಸ್ವಾಮಿ ಪುರುಷೋತ್ತಮಾನಂದ (ಜೂನ್ ೧೪, ೧೯೩೧ – ಫೆಬ್ರುವರಿ ೨೫. ೨೦೦೫) ಅವರು ರಾಮಕೃಷ್ಣಾಶ್ರಮದ ಯತಿಗಳಲ್ಲೊಬ್ಬರು. ಬೆಂಗಳೂರಿನ ಬಸವನಗುಡಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಹೆಚ್ಚಿನ ಕಾಲ ಸೇವೆ ಸಲ್ಲಿಸಿದ ಅವರು ಅಮೋಘ ಶೈಲಿಯ ಗ್ರಂಥಕರ್ತರೂ, ಅದ್ಭುತ ಪ್ರವಚನಕಾರರೂ, ಅಪೂರ್ವ ಗಾಯಕರೂ ಆಗಿದ್ದರು.
ಜೂನ್ ೧೪, ೧೯೩೧ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಾಲಿಗ್ರಾಮದ ಬಳಿಯ ಮೂಡಹಾಡು ಎಂಬಲ್ಲಿ ರಾಮಚಂದ್ರ ಬಾಯರಿ ಆಗಿ ಜನಿಸಿದ ಸ್ವಾಮೀಜಿಯವರು ಮೆಟ್ರಿಕ್ಯುಲೇಷನ್ ಮುಗಿಸಿ ಮಲ್ಪೆ ಮತ್ತು ಮಡಿಕೇರಿಗಳಲ್ಲಿ ಅಧ್ಯಾಪನ ನಡೆಸಿದರು. ಸ್ವಾಮೀಜಿ ೧೯೬೦ರ ವರ್ಷದಲ್ಲಿ ರಾಮಕೃಷ್ಣ ಪರಂಪರಗೆ ಬ್ರಹ್ಮಚಾರಿಗಳಾಗಿ ಬೆಂಗಳೂರಿನ ರಾಮಕೃಷ್ಣಾಶ್ರಮವನ್ನು ಪ್ರವೇಶಿಸಿದರು. ಅಂದಿನ ದಿನಗಳಲ್ಲಿ ಬೆಂಗಳೂರು ರಾಮಕೃಷ್ಣಾಶ್ರಮದ ಅಧ್ಯಕ್ಷರೂ, ರಾಮಕೃಷ್ಣ ಆರ್ಡರಿನ ಉಪಾಧ್ಯಕ್ಷರೂ ಆಗಿದ್ದ ಸ್ವಾಮಿ ಯತೀಶ್ವರಾನಂದರು ಅವರ ಗುರುವರ್ಯರಾದರು. ಮುಕುಂದ ಚೈತನ್ಯ ಎಂಬ ಹೆಸರಿನ ಬ್ರಹ್ಮಚಾರಿಯಾಗಿ ಸ್ವಾಮೀಜಿಯವರು ಬೇಲೂರು ಮಠದಲ್ಲಿ ಎರಡು ವರ್ಷಗಳ ತರಬೇತಿ ಪಡೆದರು.
ಆನಂತರದಲ್ಲಿ ನಡೆದದ್ದು ಸಹಸ್ರಾರು ಕರ್ನಾಟಕದ ಜನರಿಗೆ ಅಧ್ಯಾತ್ಮದ ಸಿಂಚನ . ಸ್ವಾಮಿ ಪುರುಷೋತ್ತಮಾನಂದರು ೧೯೯೩ರ ವರ್ಷದವರೆಗೆ ೩೩ ವರ್ಷಗಳ ಕಾಲ ಬೆಂಗಳೂರಿನ ರಾಮಕೃಷ್ಣಾಶ್ರಮದಲ್ಲಿದ್ದರು. ಅವರು ನಡೆಸಿದ ಚಟುವಟಿಕೆಗಳು ಅನಂತವಾದದ್ದು. ವೈವಿಧ್ಯಪೂರ್ಣವಾದದ್ದು. ವಿವೇಕಾನಂದ ಬಾಲಕ ಸಂಘ, ವಿವೇಕಾನಂದ ಯುವಕ ಸಂಘ ಮುಂತಾದ ಪ್ರಮುಖ ಸಂಯೋಜನೆಗಳ ಮೂಲಕ ಬಾಲಕರು ಮತ್ತು ಯುವಕರಿಗೆ ಅವರು ತೋರಿದ ದಾರಿದೀಪ ಮಹತ್ವಪೂರ್ಣವಾದದ್ದು. ಅಂದಿನ ದಿನಗಳಲ್ಲಿ ಪ್ರತೀ ವಾರ ಸ್ವಾಮಿ ಪುರುಷೋತ್ತಮಾನಂದರ ಪ್ರವಚನಗಳು ಎಂದೆಂದಿಗೂ ಹೌಸ್ ಫುಲ್. ಪ್ರವಚನ ಕೇಳಲಿಕ್ಕೆ ಹೋದವರಿಗೆ ಒಂದು ಭಾಷೆಯನ್ನು ಅಷ್ಟು ಸುಂದರವಾಗಿ, ಪ್ರೀತಿಪೂರ್ವಕವಾಗಿ, ಹೃದಯಪೂರ್ವಕವಾಗಿ ಅನುಭವಿಸಬಹುದು ಎಂಬುದನ್ನು ಮನದಟ್ಟು ಮಾಡಿಕೊಡುತ್ತಿದ್ದರು. ಸಾಮಾನ್ಯವಾಗಿ ಆಧ್ಯಾತ್ಮಿಕ ಪ್ರವಚನಗಳಲ್ಲಿ ಹೆಚ್ಚು ವಯಸ್ಸಾದವರು ಮಾತ್ರ ಬರುತ್ತಾರೆ ಎಂಬುದನ್ನು ಅವರ ಪ್ರವಚನಗಳು ಸುಳ್ಳು ಮಾಡಿದ್ದವು. ಅಂದಿನ ಯುವ ಪೀಳಿಗೆಯನ್ನು ಆಧ್ಯಾತ್ಮಿಕ ಪ್ರವಚನಗಳಿಗೆ ಅವರು ಸೆಳೆದ ರೀತಿ ಅಪೂರ್ವವಾದುದು. ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದ ರೀತಿ, ಕಥಾನಕಗಳನ್ನು ವರ್ಣಿಸುತ್ತಿದ್ದ ರೀತಿ, ಅದರಲ್ಲಿದ್ದ ಪ್ರೀತಿಯ ಇನಿದನಿ, ಭಕ್ತರು ನಮಸ್ಕರಿಸುತ್ತಿದ್ದಾಗ ಅವರ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಯಿಂದ ಪ್ರತಿನಮಸ್ಕರಿಸುತ್ತಾ ತೋರುತ್ತಿದ್ದ ಆತ್ಮೀಯ ಭಾವ ಇವೆಲ್ಲಾ ಜನ ಸಮುದಾಯದಲ್ಲಿ ಹೃದ್ಭಾವಗಳನ್ನು ಸೃಷ್ಟಿಸಿದ್ದವು.

Books By Swami Purushottamananda