Sl Bhyrappa

Sl Bhyrappa

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.ಇವರಿಗೆ ಭಾರತ ಸರ್ಕಾರವು ೨೦೨೩ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಆಯಾ ಕಾಲದಲ್ಲಿ ಬಂದ ಅವರ ಕಾದಂಬರಿಗಳೆಲ್ಲಾ ಚರ್ಚೆಗೆ ಒಳಗಾಗಿವೆ. ಇಂಗ್ಲಿಷ್ ಭಾಷೆಯೂ ಸೇರಿದಂತೆ ಭಾರತೀಯ ಹಲವು ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದ ಗೊಂಡಿವೆ. ಗೃಹಭಂಗ ,ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಮುಂತಾದವು ಹಿಂದಿ, ಮರಾಠಿಯಲ್ಲಿ ಜನಪ್ರಿಯವಾಗಿವೆ.
ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿ ಗಳಿಸಿವೆ. ವಂಶವೃಕ್ಷಕ್ಕೆ ೧೯೬೬ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೭೫ ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
`ಪರ್ವ’ ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿ ನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಬಿಂಬಿಸಲಾಗಿದೆ. ಲೈಂಗಿಕತೆ ಮತ್ತು ಸಾವುಗಳ ನೆಲೆಯಲ್ಲಿ ದ್ರೌಪದಿ, ಕುಂತಿ, ಮಾದ್ರಿ, ಗಾಂಧಾರಿ ಪಾತ್ರಗಳನ್ನು ವಿಶಿಷ್ಟವಾಗಿ ಮೂಡಿಸಿದ್ದಾರೆ.
ಕಾದಂಬರಿಗಳಲ್ಲದೆ ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದ `ಸಾಹಿತ್ಯ ಮತ್ತು ಪ್ರತೀಕ’, `ಕಥೆ ಮತ್ತು ಕಥಾವಸ್ತು’, `ನಾನೇಕೆ ಬರೆಯುತ್ತೇನೆ’ ಎಂಬ ಕೃತಿಗಳನ್ನೂ ಭೈರಪ್ಪ ರಚಿಸಿದ್ದಾರೆ. ಪ್ರಸ್ತುತ ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ. ೧೯೯೯ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪ ಆಯ್ಕೆಯಾಗಿದ್ದರು.

Books By Sl Bhyrappa