ಹೆಸರು ಸಚಿನ್ ತೀರ್ಥಹಳ್ಳಿ ಅವರು ಮೂಲತಃ ತೀರ್ಥಹಳ್ಳಿಯವರು. ತೀರ್ಥಹಳ್ಳಿ ತಾಲೂಕಿನ ಈಚಲಬಯಲು ಅನ್ನುವ ಹದಿನೈದೇ ಮನೆಗಳಿರುವ ಊರಲ್ಲಿ ಹುಟ್ಟಿ ಬೆಳೆದಿದ್ದು. ಬೆಂಗಳೂರಿನ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಎಂಜಿನಿಯರಿಂಗ್ ಓದಿ , ಸದ್ಯ ಇನ್ಫೋಸಿಸ್ ನಲ್ಲಿ ಪೈಥಾನ್ ಡೆವೆಲವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ಪ್ರೇಮದ ಗುಂಗು ಮತ್ತು ನಿಸರ್ಗದ ಮೌನವೇ ಬರೆಯೋಕೆ ಪ್ರೇರಣೆ ಎನ್ನುವ ಸಚಿನ್, ಕುವೆಂಪು , ಕಾರಂತ, ಅನಂತಮೂರ್ತಿ , ತೇಜಸ್ವಿ, ಮಾರ್ಕ್ವೆಜ್ ಅವರನ್ನು ಇಷ್ಟ ಪಟ್ಟು ಓದುತ್ತಾರೆ.
ಕಾವ್ಯ ಓದೋಕೆ ಇಷ್ಟ, ಬರೆಯುವ ಸಾಹಸ ಮಾಡಲ್ಲ ಎನ್ನುವ ಅವರು ಥಿಯೇಟರಿಗೇ ಹೋಗಿ ಸಿನಿಮಾ ನೋಡುವುದು, ಬೈಕೆತ್ತಿ ಬೆಂಗಳೂರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವುದು, ಕತೆಗಳಲ್ಲಿ ಕಳೆದು ಹೋಗುವುದು , ಚಿತ್ರಕತೆ ಬರೆಯುವುದು ಮತ್ತು ಕೋಡಿಂಗ್ ..ಇವಿಷ್ಟು ನನ್ನ ಆಸಕ್ತಿ ಎನ್ನುತ್ತಾರೆ. ಅವರ ಹಲವು ಕಥೆಗಳು, ಲೇಖನಗಳು ಕನ್ನಡದ ಪ್ರಮುಖ ದೈನಿಕಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಸಣ್ಣ ಕತೆಗಳ ಸಂಕಲನ ‘ನವಿಲು ಕೊಂದ ಹುಡುಗ’ ಪ್ರಕಟಗೊಂಡಿದೆ.