ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ 1982ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕುಣಿಗಲ್ಲಿನಲ್ಲಿಯೇ ಪೂರೈಸಿದರು. ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ಡಿಪ್ಲೋಮಾವನ್ನು ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.
2001ರಲ್ಲಿ ಬಳ್ಳಾರಿಯ ಜಿಂದಾಲ್ ವಿಜಯನಗರ ಉಕ್ಕಿನ ಕಾರ್ಖಾನೆಯಲ್ಲಿ (JSW) ಕಿರಿಯ ಇಂಜಿನಿಯರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಐದು ವರ್ಷಗಳ ಬಳಿಕ, ಎಲ್&ಟಿ ಸಂಸ್ಥೆಗೆ ಸೇರಿ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಎರಡು ವರ್ಷ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಬಳಿಕ ದುಬೈಗೆ ಸ್ಥಳಾಂತರವಾಗಿ 10 ವರ್ಷಗಳ ಕಾಲ ಕೆಲಸ ಮಾಡಿದರು.
ನಂತರ, ಯುದ್ಧಪೀಡಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜರ್ಮನ್ ಮೂಲದ ಸಂಸ್ಥೆಯೊಂದರಲ್ಲಿ ಇಂಜಿನಿಯರಿಂಗ್ ವಿಭಾಗದ ಉಪ-ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದರು. ಈ ಸಮಯದಲ್ಲಿ ಉತ್ತರ ಮೆಸಿಡೋನಿಯಾದಲ್ಲೂ ಸ್ವಲ್ಪ ಕಾಲ ನೆಲೆಸಿದ್ದರು. 2018ರಿಂದ ಮೈಸೂರಿನಲ್ಲಿ ವಾಸವಿದ್ದು, ಸದ್ಯಕ್ಕೆ ಸಿಂಗಾಪುರ ಮೂಲದ ಸಂಸ್ಥೆಗೆ ಕನ್ಸಲ್ಟಿಂಗ್ ಇಂಜಿನಿಯರ್ ಆಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ವೃತ್ತಿಪರ ಜೀವನದ ಪ್ರಭಾವದಿಂದಾಗಿ ಆಫ್ಘಾನಿಸ್ತಾನ್, ಇರಾಕ್, ಗಲ್ಫ್ ದೇಶಗಳು, ಯುರೋಪ್ ಮತ್ತು ಅಮೇರಿಕಾದಂತಹ ವಿವಿಧ ದೇಶಗಳಿಗೆ ಪ್ರಯಾಣಿಸಿದ ಅನುಭವ ಹೊಂದಿದ್ದಾರೆ.
ಬಾಲ್ಯದಿಂದಲೇ ಕನ್ನಡ ಸಾಹಿತ್ಯ ಓದಲು ಅಭಿರುಚಿ ಹೊಂದಿದ್ದು, ಲೇಖನ, ಕಥೆ, ಪ್ರವಾಸ ಹಾಗೂ ಅನುಭವ ಕಥನ ಬರೆಯುವ ಹವ್ಯಾಸಿ ಬರಹಗಾರರಾಗಿದ್ದಾರೆ. 2022ರಲ್ಲಿ ವಿಜಯಕರ್ನಾಟಕ ಮತ್ತು ವೀರಲೋಕ ಪ್ರಕಾಶನ ಆಯೋಜಿಸಿದ್ದ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆ ಪ್ರಶಸ್ತಿ ಗಳಿಸಿದೆ.
ವೀರಲೋಕ ಪ್ರಕಾಶನದ ಮೂಲಕ ಪ್ರಕಟವಾದ ‘ಕುಣಿಗಲ್ ಟು ಕಂದಹಾರ್’ ಎಂಬ ಕೃತಿಯು ಅವರ ಮೊದಲ ಪುಸ್ತಕವಾಗಿದ್ದು, ಅಫ್ಘಾನ್ ಯುದ್ಧಭೂಮಿಯ ಕುರಿತ ಅನುಭವಗಳನ್ನು ಹಂಚಿಕೊಳ್ಳುತ್ತದೆ.