M Gopalakrishna Adiga

M Gopalakrishna Adiga

ಎಂ. ಗೋಪಾಲಕೃಷ್ಣ ಅಡಿಗ : – (೧೮ ಫೆಬ್ರುವರಿ ೧೯೧೮ – ೧೪ ನವೆಂಬರ ೧೯೯೨) ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ. ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ, ಕನ್ನಡದಲ್ಲಿ ದೇಶಭಕ್ತಿಯ ಗೀತೆಗಳನ್ನೂ ರಚಿಸುತ್ತಿದ್ದರಂತೆ. ದಕ್ಷಿಣ ಕನ್ನಡ ಜಿಲ್ಲೆ ಯಕ್ಷಗಾನದ ತವರೂರು. ಚಿಕ್ಕಂದಿನಲ್ಲಿ ಅಡಿಗರು ಯಕ್ಷಗಾನ ಪ್ರಸಂಗಗಳು ಸುತ್ತಮುತ್ತ ಎಲ್ಲಿ ನಡೆದರೂ ತಪ್ಪಿಸಿಕೊಳ್ಳದೆ ನೋಡುತ್ತಿದ್ದರಂತೆ. ಆ ಹಾಡುಗಳ, ಮಟ್ಟುಗಳ ಕುಣಿತದ ಭಂಗಿಗಳು ಅವರ ಮನಸ್ಸಿನಲ್ಲಿ ಸದಾ ಅನುರಣನಗೊಳ್ಳುತ್ತಿತ್ತಂತೆ. “ಈ ವಾತಾವರಣದಲ್ಲಿ ನಾನು ನನ್ನ ಹದಿಮೂರನೇ ವಯಸ್ಸಿನಲ್ಲೇ ಪದ್ಯ ರಚನೆಗೆ ಕೈ ಹಾಕಿದೆನೆಂದು ತೋರುತ್ತದೆ. ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿ, ಕಂದ ಪದ್ಯಗಳನ್ನು ರಚಿಸುತ್ತಿದ್ದೆ” ಎಂದು ಅವರೇ ಹೇಳಿದ್ದಾರೆ.

ಕನ್ನಡ ಸಾಹಿತ್ಯದ ನವ್ಯ ಕಾವ್ಯದ ಪ್ರವರ್ತಕರು. ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಸರ್ವಕಾಲಿಕ ಶ್ರೇಷ್ಠ ಕವಿಗಳಲ್ಲೊಬ್ಬರು. ಕನ್ನಡದ ಕಾವ್ಯ ಕ್ಷೇತ್ರದಲ್ಲಿ ನವ್ಯತೆ ಎಂಬ ಹೊಸ ಸಂಪ್ರದಾಯವನ್ನು ಬೆಳೆಸಿ, ಅದನ್ನು ಪರಾಕಾಷ್ಠೆಗೊಯ್ದು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಲು ಕಾರಣರಾದ ನವ್ಯ ಕಾವ್ಯದ ಪ್ರವರ್ತಕ ಕವಿ. ಕಾವ್ಯದಲ್ಲಿ ಅವರು ಮಾಡಿದ ಕ್ರಾಂತಿಕಾರಿ ಪರಿವರ್ತನೆ ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಇತರ ಸಾಹಿತ್ಯ ಪ್ರಕಾರಗಳ ಮೇಲೂ ಪ್ರಭಾವ ಬೀರಿ, ಸಮಗ್ರ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿತು. ಅಡಿಗರು ಕನ್ನಡ ವಿಮರ್ಶೆಯಲ್ಲೂ ಪ್ರಬುದ್ಧತೆಯನ್ನು ತಂದರು. `ಸಾಕ್ಷಿ’ ಎಂಬ ಉನ್ನತಮಟ್ಟದ ಸಾಹಿತ್ಯಪತ್ರಿಕೆಯನ್ನು ಸುಮಾರು ಇಪ್ಪತ್ತು ವರ್ಷ ಕಾಲ ನಡೆಸಿ, ಹೊಸ ಸಂವೇದನೆಯನ್ನು ಹೊಸ ಲೇಖಕರನ್ನು ಪ್ರೋತ್ಸಾಹಿಸಿದರು. ತಮ್ಮ ಕಾವ್ಯ, ಗದ್ಯ, ವೈಚಾರಿಕತೆ, ವ್ಯಕ್ತಿತ್ವ, ಪ್ರಭಾವ, ಮಾರ್ಗದರ್ಶನಗಳ ಮೂಲಕ ಅಡಿಗರು ಮಾಡಿದ ಸಾರಸ್ವತ ಸಾಧನೆ ಅನನ್ಯವಾದುದು.ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ- ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರ ಎಲ್ಲಾ ವೈಚಾರಿಕ ಲೇಖನಗಳೂ ‘ಸಮಗ್ರಗದ್ಯ’(ಸಾಕ್ಷಿಪ್ರಕಾಶನ, 1977) ಸಂಪುಟವೊಂದರಲ್ಲಿ ಪ್ರಕಟವಾಗಿದೆ. ಅಡಿಗರ ಮೊದಲ ಕವನ ಸಂಕಲನ ‘ಭಾವತರಂಗ’ದ ಮುನ್ನುಡಿಯಲ್ಲಿ ಬೇಂದ್ರೆಯವರು ಹೇಳಿದ್ದಾರೆ: “ನಾನು ಕವಿತೆಗಳನ್ನು ಬರೆಯಲು ಆರಂಭಿಸಿದಾಗ ಇದ್ದ ಶೈಲಿಯ ಪ್ರಾಯೋಗಿಕತೆ ಇಂದಿನ ಕನ್ನಡದಲ್ಲಿ ಅಷ್ಟುಮಟ್ಟಿಗೆ ಇಲ್ಲ. ಗೆಳೆಯ ಗೋಪಾಲಕೃಷ್ಣರಿಗೆ ಅವರ ವಯಸ್ಸಿಗಿದ್ದ ಶೈಲಿಯ ಪಾಕ ನನಗೆ ಆ ವಯಸ್ಸಿಗೆ ಇರಲಿಲ್ಲ. ಆದರೆ ನಮಗೆ ಆ ಕಾಲದಲ್ಲಿದ್ದ ನಾವಿನ್ಯದ ಅನುಕೂಲ ಈಗಿನವರಿಗಿಲ್ಲ”. ಬೇಂದ್ರೆಯವರು ಹೇಳುವಂತೆ ಆ ಕಾಲಕ್ಕಾಗಲೇ ಕನ್ನಡ ಕಾವ್ಯ ಸಂದರ್ಭ ಸಿದ್ಧಶೈಲಿಯೊಂದು ರೂಪುಗೊಂಡಿತ್ತು. ನವೋದಯ ಕಾವ್ಯ ಸಂಪ್ರದಾಯದ ಅತ್ಯುತ್ತಮ ಕಾವ್ಯ ಸೃಷ್ಟಿಯಾಗಿತ್ತು. 1926ರ ವೇಳೆಗೆ ಬೀ.ಎಂ.ಶ್ರೀ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಮುನ್ನಡೆದ ಕನ್ನಡ ಕಾವ್ಯ ಒಂದು ಸ್ಪಷ್ಟ ರೂಪ ಪಡೆದು ಮಹತ್ವದ ಸಂಕಲನಗಳು ಆ ವೇಳೆಗಾಗಲೇ ಪ್ರಕಟವಾಗಿದ್ದವು. ಹೊಸದಾಗಿ ಬರೆಯಲು ಆರಂಭಿಸುವ ತರುಣರಿಗೆ ಒಂದು ಕಾವ್ಯ ಮಾದರಿ ಕಣ್ಣೆದುರಿಗಿತ್ತು. ಈ ದಾರಿಯನ್ನು ಬಿಟ್ಟ ಹೊಸದಾರುಯನ್ನು ಕಂಡುಕೊಳ್ಳುವುದು, ತನ್ನತನವನ್ನು ರೂಪಿಸಿಕೊಳ್ಳುವುದು ಅಡಿಗರು ಕಾವ್ಯ ರಚನೆಯಲ್ಲಿ ಎದುರಿಸಿದ ಬಹುಮುಖ್ಯ ಸಮಸ್ಯೆ ಎಂದು ತೋರುತ್ತದೆ

 

Books By M Gopalakrishna Adiga