ಕುಮಾರಸ್ವಾಮಿ ತೆಕ್ಕುಂಜ ಅವರು ಇಲೆಕ್ಟಿಕಲ್ ಇಂಜಿನಿಯರಿಂಗ್ ಪದವೀಧರರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಮುಂಬಯಿಯಲ್ಲಿ ‘ಫಿಯಟ್ ಅಟೊಮೊಬೈಲ್ ಕಂಪೆನಿ’ಯ ತಾಂತ್ರಿಕ ವಿಭಾಗದಲ್ಲಿ ಮತ್ತು ಐದು ವರ್ಷ ಮಹಾರಾಷ್ಟ್ರದ ನಾಸಿಕದಲ್ಲಿ ‘ಮಹೀಂದ್ರ ಮತ್ತು ಮಹೀಂದ್ರ ಕಂಪೆನಿಯಲ್ಲಿ ಕೆಲಸಮಾಡಿ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿ ನಲ್ಲಿರುವ ‘ಜನರಲ್ ಮೋಟರ್ ಟೆಕ್ನಿಕಲ್ ಸೆಂಟರ್’ನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆ ನಿಂತ ಮೇಲೆ, ಹವಿಗನ್ನಡದ ಬ್ಲೊಗುಚ್ಛ ‘ಒಪ್ಪಣ್ಣ. ಕಾಂ’ನಲ್ಲಿ 2011ರಿಂದ ಬರೆಯಲು ಆರಂಭಿಸಿದ್ದು, ಇದೀಗ, ನಿವೃತ್ತಿಯ ಅಂಚಿನಲ್ಲಿರುವ ಸಮಯದಲ್ಲಿ ಕನ್ನಡದಲ್ಲಿಯೂ ಬರೆಯಲು ತೊಡಗಿಸಿಕೊಂಡಿದ್ದಾರೆ. ದೇನೆ. ಕನ್ನಡ ಪೌರಾಣಿಕ ಕಾದಂಬರಿ ‘ಮಂಡೋದರಿ’ ಬಿಡುಗಡೆಗೊಂಡಿದೆ. ಈ ಕಾದಂಬರಿಯಲ್ಲಿ ರಾವಣನ ಮಡದಿ ಮಂಡೋದರಿಯ ಚಿತ್ರಣವಿದೆ. ಜೊತೆಗೆ, ರಾಮಾಯಣ ಯುದ್ಧ ಕಾಲದಲ್ಲಿ ರಾವಣಾಂತಪುರದ ಸ್ತ್ರೀಯರ ಪಾಡುಗಳು, ಸೀತಾಪಹಾರವಾದ ನಂತರದಲ್ಲಿ ಶೂರ್ಪಣಖಿ ಏನಾದಳು ಎಂಬ ಜಿಜ್ಞಾಸೆಯೂ ಸೇರಿವೆ. ಅಪಹರಿಸಿ ತಂದ ಸೀತೆಯನ್ನು ಮರಳಿಸುವಂತೆ ರಾವಣನ ಮನಃಪರಿವರ್ತನೆಗೆ ಏನೆಲ್ಲ ಪ್ರಯತ್ನವನ್ನು ಮಂಡೋದರಿ ನಡೆಸಿರಬಹುದು ಎಂಬ ವಿವರಣೆಯಿದೆ. ‘ಪಾರುಪತಿಯ ಪಾರುಪತ್ಯ’ ಎಂಬ ಹವಿಗನ್ನಡ ಕೃತಿ ಅಚ್ಚಿನಲ್ಲಿದೆ.