Kalidasa

Kalidasa

ಕಾಳಿದಾಸನು ಭಾರತ ದೇಶದ ಒಬ್ಬ ಮಹಾಕವಿ. ಸಂಸ್ಕೃತ ಭಾಷೆಯಲ್ಲಿ ಕಾವ್ಯಗಳನ್ನೂ, ನಾಟಕಗಳನ್ನೂ ರಚಿಸಿದ್ದಾರೆ. “ಕವಿಕುಲಗುರು” ಎಂದು ಪ್ರಖ್ಯಾತನಾದವನು. ಇವನು ಸಂಸ್ಕೃತದ ಇನ್ನೊಬ್ಬ ಶ್ರೇಷ್ಠಕವಿ ಅಶ್ವಘೋಷನ ನಂತರ ಸಾಹಿತ್ಯವಲಯದಲ್ಲಿ ಹೆಸರು ಪಡೆದವನು.
ಕಾಳಿದಾಸನ ಜನನದ ಕುರಿತೂ ಮಾಹಿತಿಗಳಿಲ್ಲ. ಕುರುಬರ ವಂಶದಲ್ಲಿ ಹುಟ್ಟಿ, ಕುರಿ ಮೇಯಿಸುತ್ತಾ ಇದ್ದ ಸುಂದರಾಂಗನಾಗಿದ್ದನೆಂದು ಪ್ರತೀತಿ. ಯಾವ ರೀತಿಯ ವಿದ್ಯೆಯನ್ನೂ ಕಲಿಯದವನಾಗಿದ್ದು, ಮುಗ್ಧನೂ, ಮೂಢನೂ ಆಗಿದ್ದನಂತೆ. ನೀಚಬುದ್ಧಿಯ ಮಂತ್ರಿಯ ಕುತಂತ್ರಕ್ಕೊಳಗಾಗಿ ರಾಜಕುಮಾರಿಯೊಬ್ಬಳಿಗೆ ಅವನ ಮದುವೆ ಮಾಡಿಸಿದರಂತೆ. ನಿಜಾಂಶವನ್ನು ತಿಳಿದ ಬಳಿಕ ಅವಳು ಅವನಿಗೆ ರಾತ್ರಿಯಿಡೀ ಅವ್ಯಾಹತವಾಗಿ ಕಾಳಿಕಾದೇವಿಯ ನಾಮಸ್ಮರಣೆಯನ್ನು ಮಾಡುವಂತೆ ಆದೇಶಿಸಿದ್ದರಿಂದ ಪ್ರಸನ್ನಳಾದ ದೇವಿಯ ವರದಿಂದ ಸಕಲ ವಿದ್ಯಾ ಪಾರಂಗತನಾದನಂತೆ. ಹಾಗಾಗಿ ಕಾಳಿದಾಸನೆಂಬ ಹೆಸರಾಯಿತು ಎಂದೆಲ್ಲಾ ದಂತಕತೆ. ಅವನ ಜನ್ಮ, ಅವಿದ್ಯೆ, ಮೌಢ್ಯ, ಇತ್ಯಾದಿಗಳು ನಿಜವಿರಬಹುದು; ಮಂತ್ರಿಯ ಕುತಂತ್ರದಿಂದ ರಾಜಕುಮಾರಿಯೊಡನೆ ಮದುವೆಯೂ ಆಗಿರಬಹುದು. ಕಾಳಿಯ ವರದಿಂದ ಸಕಲವಿದ್ಯಾಪಾರಂಗತನಾದನೆನ್ನುವದಕ್ಕಿಂತ ಬಹುಶಃ ಕೈಹಿಡಿದ ಆ ರಾಜಕುಮಾರಿಯಿಂದಲೇ ಕಲಿತು ವಿದ್ಯಾವಂತನಾಗಿರಬಹುದು ಎನ್ನುವದು ನಂಬುವಂತಹದು. ಹೀಗೆಯೇ ಅವನು ವಿದೇಶೀಯನೆಂದೂ, ಅವನ ವೈಜ್ಞಾನಿಕ, ಭೌಗೋಳಿಕ, ಜ್ಯೋತಿಷ್ಯ, ಮೊದಲಾದ ಜ್ಞಾನವೆಲ್ಲ ಗ್ರೀಕ್ ಹಿನ್ನೆಲೆಯಿಂದ ಬಂತೆನ್ನುವ ಕತೆಯೂ ಇದೆ; ಆದರೆ ಇದಕ್ಕೆ ಯಾವ ರೀತಿಯ ಆಧಾರವೂ ಎಲ್ಲೂ ದೊರೆತಿಲ್ಲ.
ಸಂಸ್ಕೃತ ಸಾಹಿತ್ಯದಲ್ಲಿ ಮಹೋತ್ತಮನೆಂದು ಹೆಸರು ಪಡೆದವರಲ್ಲಿ ಮೊಟ್ಟಮೊದಲನೆಯವನು ಅಶ್ವಘೋಷ. ಇವನ ಕಾಲದ ಸುಮಾರು ಮೂರು ಶತಮಾನಗಳ ನಂತರ ಬಂದನೆನ್ನಲಾದ ಕಾಳಿದಾಸನ ಕೃತಿಗಳಲ್ಲಿ ಇವನ ಪ್ರಭಾವವು ಗಾಢವಾಗಿ ಬೀರಿರುವುದನ್ನು ಗಮನಿಸಲಾಗಿದೆ. ಅಗಣಿತ ಸಾಹಿತ್ಯರಚನೆಗಳನ್ನು ಕಾಳಿದಾಸನ ಹೆಸರಿನೊಂದಿಗೆ ಜೋಡಿಸಲ್ಪಟ್ಟಿರುವದು ಗೋಚರವಾದರೂ, ಕಾರಣಾಂತರಗಳಿಂದ ಹಲವು ಅನಾಮಧೇಯ ಕೃತಿಕಾರರ ಹಾಗೂ ಅವನ ಹೆಸರನ್ನೇ ಹೋಲುವವರ ರಚನೆಗಳವು ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಏಳು ಕೃತಿಗಳನ್ನು ಮಾತ್ರ ಅವನಿಂದ ರಚಿತವಾದವೆಂದು ತೀರ್ಮಾನವಾಗಿದೆ.
ಒಂದು- ಮಹಾಕಾವ್ಯ ‘ರಘುವಂಶ’. ಮತ್ತೊಂದು ಹಾಗೂ ಕೊನೆಯದೆಂದೆಣಿಸಲಾದ ನಾಟಕ ‘ಅಭಿಜ್ಞಾನ ಶಾಕುಂತಲ’. ಇದು ವಿಶ್ವದ ಅತ್ಯುತ್ತಮ ನಾಟಕಗಳಲ್ಲೊಂದು ಎಂದು ಪ್ರಸಿದ್ಧ. ಇದನ್ನು ಓದಿದ ಜರ್ಮನ್ ಪ್ರಸಿದ್ಧ ಕವಿ ಗೋಏಟೇ ಅತ್ಯಂತ ವಿಮುಗ್ಧನೂ ಪರಮಾನಂದಿತನೂ ಆಗಿದ್ದುದು ಸರ್ವಶ್ರುತ. ಈ ನಾಟಕವು ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ಈ ನಾಟಕವನ್ನು ಬರೆಯುವ ವೇಳೆಗೆ ಕವಿಗೆ ತನ್ನ ಶಕ್ತಿಯಲ್ಲಿ ಅಪಾರ ಆತ್ಮವಿಶ್ವಾಸ ವಿದ್ದು, ತನ್ನ ಬದುಕು ಧನ್ಯವಾಯಿತೆಂಬ ಭಾವನೆ ಮೂಡಿದೆ. ಇದರ ಫಲವಾಗಿ, “ಈ ಭವದಿಂದ ನನಗೆ ಬಿಡುಗಡೆಯಾಗಲಿ; ಮರುಹುಟ್ಟನು ನನಗೆ ಆ ಮಹೇಶನು ಕರುಣಿಸದಿರಲಿ” ಎಂದು ಪ್ರಾರ್ಥಿಸುತ್ತಾ ನಾಟಕವನ್ನು ಕವಿಯು ಮುಗಿಸುತ್ತಾನೆ. ಬದುಕಿನಲ್ಲಿ ಕೃತಕೃತ್ಯನಾದವನು ಆಡುವ ಭರತವಾಕ್ಯವಿದು ಎನ್ನುತ್ತಾರೆ ವಿಮರ್ಶಕರು.

Books By Kalidasa