ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರು ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದಾರೆ.
ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
ಜೋಗಿ ಕನ್ನಡಪ್ರಭ ಪತ್ರಿಕೆಗೆ ‘ಬಾಲಿವುಡ್ ಘಾಸಿಪ್’ ಎಂಬ ಅಂಕಣ ಬರೆಯುತ್ತಿದ್ದರು. ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ‘ರವಿ ಕಾಣದ್ದು’ ಅಂಕಣ ಬರೆಯುತ್ತಿದ್ದ ಜೋಗಿ ಅದೇ ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಅನೇಕ ವರುಷಗಳಿಂದ ಹಾಯ್ ಬೆಂಗಳೂರ್ ಪತ್ರಿಕೆಗೆ ಸತತವಾಗಿ ಅಂಕಣ ಬರೆಯುತ್ತಾ ಬಂದವರು ಜೋಗಿ. ‘ಅಚ್ಚರಿ’ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಜೋಗಿ, ಜಾನಕಿ, ಗಿರೀಶ್ ರಾವ್ ಹತ್ವಾರ್, ಎಚ್ ಗಿರೀಶ ರಾವ್, ಸತ್ಯವ್ರತ ಹೊಸಬೆಟ್ಟು ಹೀಗೆ ಅನೇಕ ಕಾವ್ಯನಾಮಗಳಲ್ಲಿ ಬರೆಯುತ್ತಿರುವ ಜೋಗಿ ಕನ್ನಡಪ್ರಭ ಪತ್ರಿಕೆಯಲ್ಲಿ ಸಹ ಪುರವಣಿ ಸಂಪಾದಕರಾಗಿ ಕೆಲಸ ಮಾಡಿದವರು. ತಮ್ಮ ಚುರುಕಾದ ಚಲನಚಿತ್ರ ವಿಮರ್ಶೆಗಳಿಂದ, ಪುಸ್ತಕ ವಿಮರ್ಶೆಯಿಂದ ಗಮನ ಸೆಳೆದರು. ಅದರ ಜೊತೆಗೇ ಕತೆಗಾರರಾಗಿಯೂ ಹೊರಹೊಮ್ಮಿದ ಅವರು, ಕ್ರಮೇಣ ಕಾದಂಬರಿಗಳ ರಚನೆಯಲ್ಲೂ ತೊಡಗಿದರು.
ಪತ್ರಿಕೋದ್ಯಮ ಮತ್ತು ಸಾಹಿತ್ಯದ ಜೊತೆಗೇ ಜೋಗಿ ಕಿರುತೆರೆ ಧಾರವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ. ಶಕ್ತಿ, ಯಶವಂತ ಚಿತ್ತಾಲರ ಶಿಕಾರಿ, ಬೆಳ್ಳಿತೆರೆ, ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಬಂದೇಬರತಾವ ಕಾಲ, ಶುಭಮಂಗಳ – ಅವರು ಸಂಭಾಷಣೆ ಬರೆದ ಕೆಲವು ಧಾರಾವಾಹಿಗಳು. ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆಗಳನ್ನೂ ಬರೆದ ಜೋಗಿ ಅನಂತಮೂರ್ತಿಯವರ ‘ಮೌನಿ’ ಕತೆಯನ್ನು ತೆರೆಗೆ ಅಳವಡಿಸುವಲ್ಲಿ ಚಿತ್ರಕತೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ. ಅವರದೇ ಕತೆ ಕಾಡಬೆಳದಿಂಗಳು ಚಿತ್ರವಾಗಿದೆ. ಅದಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಕತೆ ಪ್ರಶಸ್ತಿಯೂ ಲಭಿಸಿದೆ.
ಮಯೂರ, ತರಂಗ, ತುಷಾರ, ಸುಧಾ, ಕನ್ನಡಪ್ರಭ, ಪ್ರಜಾವಾಣಿ, ಓ ಮನಸೇ ಮುಂತಾದ ಪತ್ರಿಕೆಗಳಲ್ಲಿ ಕತೆಗಳನ್ನು ಪ್ರಕಟಿಸಿದ ಜೋಗಿ ಲಂಕೇಶ್ ಪತ್ರಿಕೆಗೆ ಎಚ್.ಗಿರೀಶ ಹೆಸರಲ್ಲಿ ಪ್ರಬಂಧಗಳನ್ನು ಬರೆಯುತ್ತಿದ್ದರು. ಅನಾಮಧೇಯ ಹೆಸರಲ್ಲಿ ಪುಸ್ತಕ ವಿಮರ್ಶೆ ಮಾಡುತ್ತಿದ್ದರು. ಮಣಿಪಾಲ ಸಮೂಹದ ರೂಪತಾರಾ ಪತ್ರಿಕೆಯ ರೂವಾರಿಯಾಗಿದ್ದರು. ಕನ್ನಡಪ್ರಭ ಪತ್ರಿಕೆಯ ಪ್ರಧಾನ ಪುರವಣಿ ಸಂಪಾದಕರಾಗಿ ದುಡಿಯುತ್ತಿದ್ದಾರೆ (೨೦೨೩). ಪ್ರವಾಸ ಪ್ರೇಮಿಯಾದ ಜೋಗಿ ಅಮೆರಿಕಾ, ಶ್ರೀಲಂಕಾ, ನೇಪಾಳ, ಥೈಲ್ಯಾಂಡ್, ಸಿಂಗಾಪುರ್, ಮಲೇಷಿಯಾ ಮುಂತಾದ ದೇಶಗಳನ್ನು ಸುತ್ತಾಡಿದ್ದಾರೆ.