ಜೋಗಿ ಎಂದೇ ಪರಿಚಿತರಾದ ಗಿರೀಶ್ ರಾವ್ ಹತ್ವಾರ್ ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರು. ಅವರು ಹಲವಾರು ಕತೆಗಳು, ಕಾದಂಬರಿಗಳು ಹಾಗೂ ಅಂಕಣ ಬರಹಗಳ ಮೂಲಕ ಹೆಸರು ಮಾಡಿದ್ದಾರೆ. ಧಾರಾವಾಹಿ, ಸಿನೆಮಾ ಗೀತಸಾಹಿತ್ಯ, ಚಿತ್ರಕಥೆ ಮತ್ತು ಸಂಭಾಷಣೆ ರಚನೆಯಲ್ಲಿ ತೊಡಗಿಸಿಕೊಂಡಿರುವ ಜೋಗಿ ವೃತ್ತಿಯಿಂದ ಪತ್ರಕರ್ತರಾಗಿದ್ದಾರೆ.
ಮಂಗಳೂರಿನ ಸುರತ್ಕಲ್ ಸಮೀಪದ ಹೊಸಬೆಟ್ಟು ಅವರ ಹುಟ್ಟೂರು. ಹತ್ವಾರ್ ಮನೆತನದವರು ಆಗಿರುವ ಜೋಗಿ ತಮ್ಮ ಶಿಕ್ಷಣವನ್ನು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಯಲ್ಲಿ ಪಡೆದರು. ಅವರ ತಂದೆ ಶ್ರೀಧರರಾವ್ ಕೃಷಿಕರಾಗಿದ್ದು, ತಾಯಿ ಶಾರದೆ. ಅವರ ಹಿರಿಯ ಸೋದರ ಹತ್ವಾರ್ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳ ಬರೆದ ಪ್ರಸಿದ್ಧ ಲೇಖಕರಾಗಿದ್ದರು.
ಜೋಗಿ ೧೮ನೇ ವಯಸ್ಸಿನಲ್ಲಿ ಬರಹ ಆರಂಭಿಸಿದರು. ಬಿ.ಕಾಂ. ಪದವಿ ಪಡೆದ ಅವರ ಸಾಹಿತ್ಯಾಸಕ್ತಿಗೆ ಬಳ್ಳ ವೆಂಕಟರಮಣ ಪ್ರೇರಣೆ ನೀಡಿದರು. ೧೯೮೯ರಲ್ಲಿ ಬೆಂಗಳೂರಿಗೆ ಬಂದ ಜೋಗಿ ವೈಎನ್ ಕೆ ಅವರ ಪ್ರಭಾವದಿಂದ ಈ ಹೆಸರು ಪಡೆದರು. ಪ್ರಸ್ತುತ ಅವರು ಪತ್ನಿ ಜ್ಯೋತಿ ಮತ್ತು ಮಗಳು ಖುಷಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಪತ್ರಿಕೋದ್ಯಮದಲ್ಲಿ ಸಾಕಷ್ಟು ಅನುಭವ ಹೊಂದಿರುವ ಜೋಗಿ ಕನ್ನಡಪ್ರಭದಲ್ಲಿ ‘ಬಾಲಿವುಡ್ ಘಾಸಿಪ್’ ಅಂಕಣ ಬರೆಯುತ್ತಿದ್ದರು. ಹಾಯ್ ಬೆಂಗಳೂರಿನಲ್ಲಿ ‘ರವಿ ಕಾಣದ್ದು’ ಅಂಕಣ ಬರೆಯುತ್ತ, ಅದೇ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ‘ಅಚ್ಚರಿ’ ಮಾಸಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದರು. ಜೋಗಿ, ಜಾನಕಿ, ಗಿರೀಶ್ ರಾವ್ ಹತ್ವಾರ್, ಎಚ್. ಗಿರೀಶ್ ರಾವ್, ಸತ್ಯವ್ರತ ಹೊಸಬೆಟ್ಟು ಎಂಬ ವಿವಿಧ ಕಾವ್ಯನಾಮಗಳಲ್ಲಿ ಅವರು ಬರೆಯುತ್ತಾರೆ.
ಅವರು ಚಲನಚಿತ್ರ ವಿಮರ್ಶೆ, ಪುಸ್ತಕ ವಿಮರ್ಶೆಗಳಲ್ಲಿ ಖ್ಯಾತಿ ಗಳಿಸಿದ ಜೊತೆಗೆ ಕತೆಗಾರ ಮತ್ತು ಕಾದಂಬರಿಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ಬರಹಗಳು ಮಯೂರ, ತರಂಗ, ತುಷಾರ, ಸುಧಾ, ಕನ್ನಡಪ್ರಭ, ಪ್ರಜಾವಾಣಿ, ಓ ಮನಸೇ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಲಂಕೇಶ್ ಪತ್ರಿಕೆಯಲ್ಲಿ ಎಚ್.ಗಿರೀಶ್ ಹೆಸರಿನಲ್ಲಿ ಪ್ರಬಂಧ ಬರೆಯುತ್ತ, ಅನಾಮಧೇಯವಾಗಿ ಪುಸ್ತಕ ವಿಮರ್ಶೆ ಮಾಡುತ್ತಿದ್ದರು.
ಜೋಗಿ ಕಿರುತೆರೆಯ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುವ ಕೆಲಸ ಮಾಡಿದ್ದಾರೆ. ಶಕ್ತಿ, ಯಶವಂತ ಚಿತ್ತಾಲರ ಶಿಕಾರಿ, ಬೆಳ್ಳಿತೆರೆ, ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಬಂದೇ ಬರತಾವ ಕಾಲ, ಶುಭಮಂಗಳ ಮುಂತಾದ ಧಾರಾವಾಹಿಗಳಿಗೆ ಸಂಭಾಷಣೆ ರಚಿಸಿದ್ದಾರೆ. ಅವರು ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆಗಳನ್ನೂ ಬರೆದಿದ್ದಾರೆ. ಅನಂತಮೂರ್ತಿಯವರ ‘ಮೌನಿ’ ಕಥೆಯ ಚಿತ್ರಕತೆ ಮತ್ತು ಸಂಭಾಷಣೆ ರಚಿಸಿ, ಅದನ್ನು ತೆರೆಗೆ ತಂದರು. ಅವರದೇ ಕತೆ ಆಧಾರಿತ ‘ಕಾಡಬೆಳದಿಂಗಳು’ ಚಲನಚಿತ್ರ ರಾಜ್ಯ ಸರ್ಕಾರದ ಅತ್ಯುತ್ತಮ ಕತೆ ಪ್ರಶಸ್ತಿ ಗಳಿಸಿತು.
ಕನ್ನಡಪ್ರಭ ಪತ್ರಿಕೆಯ ಪ್ರಧಾನ ಪುರವಣಿ ಸಂಪಾದಕರಾಗಿ ೨೦೨೩ರಲ್ಲಿ ಕಾರ್ಯನಿರ್ವಹಿಸುತ್ತಿರುವ ಜೋಗಿ, ಪ್ರವಾಸಪ್ರಿಯರೂ ಹೌದು. ಅವರು ಅಮೆರಿಕಾ, ಶ್ರೀಲಂಕಾ, ನೇಪಾಳ, ಥೈಲ್ಯಾಂಡ್, ಸಿಂಗಾಪುರ್, ಮಲೇಷಿಯಾ ಮುಂತಾದ ದೇಶಗಳನ್ನು ಭೇಟಿಯಾಗಿದೆ.