Jayant Kaikini

Jayant Kaikini

ಜಯಂತ್ ಗೌರೀಶ ಕಾಯ್ಕಿಣಿ (ಜನನ: ಜನವರಿ 24, 1955) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ಅವರ ಸಾಹಿತ್ಯದಲ್ಲಿ ಸೂಕ್ಷ್ಮ ಸಂವೇದನೆ, ಮಾನವೀಯ ಸ್ಪರ್ಶ ಮತ್ತು ಕಾವ್ಯಾತ್ಮಕತೆ ಕಂಡುಬರುತ್ತವೆ. ಇಳಿಸಂಜೆಯ ಬಿಸಿಲು, ಬಿಸಿಲುಕೋಲು, ಪಾತರಗಿತ್ತಿ, ಬಣ್ಣ ಮುಂತಾದ ಚಿತ್ರಣಗಳು ಅವರ ಬರಹಗಳಲ್ಲಿ ಪೌರಾಣಿಕವಾಗಿ ವ್ಯಕ್ತವಾಗುತ್ತವೆ. ಅವರು ಮೆದುಮಾತಿನ, ಮೆಲುದನಿಯ ವ್ಯಕ್ತಿತ್ವದ ಚಿಂತನಶೀಲ ಬರಹಗಾರನಾಗಿ ಗುರುತಿಸಿಕೊಂಡಿದ್ದಾರೆ.

ಸಾಹಿತ್ಯ, ನಾಟಕ, ಚಲನಚಿತ್ರ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿರುವ ಜಯಂತ್, ಕವಿಯಾಗಿ, ಕಥೆಗಾರನಾಗಿ, ನಾಟಕಕಾರನಾಗಿ, ಅಂಕಣಕಾರನಾಗಿ, ಸಿನಿಮಾ ಗೀತಸಾಹಿತಿಯಾಗಿ, ಸಂಭಾಷಣಾ ಬರಹಗಾರನಾಗಿ ಮತ್ತು ಟೀವಿ ಚಾನೆಲ್ ಸಂದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಸಾಗರದಾಚೆಗೂ ನೆಲೆಸಿರುವ ಕನ್ನಡಿಗರ ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ್, ಹೆಸರಾಂತ ಸಾಹಿತಿ ಶ್ರೀಮತಿ ಶಾಂತಾ ಕಾಯ್ಕಿಣಿ ದಂಪತಿಯ ಪುತ್ರ. ತಂದೆ ವೃತ್ತಿಯಲ್ಲಿ ಅಧ್ಯಾಪಕ, ತಾಯಿ ಸಮಾಜಸೇವಕಿ ಮತ್ತು ಅಧ್ಯಾಪಕಿ. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಗೋಕರ್ಣದ ಭದ್ರಕಾಳಿ ವಿದ್ಯಾಸಂಸ್ಥೆಯಲ್ಲಿ ಹಾಗೂ ಕಾಲೇಜು ಶಿಕ್ಷಣವನ್ನು ಕುಮಟಾದ ಬಾಳಿಗ ವಿದ್ಯಾಸಂಸ್ಥೆಯಲ್ಲಿ ಪೂರೈಸಿದರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಎಂ.ಎಸ್ಸಿ (ಬಯೋಕೆಮಿಸ್ಟ್ರಿ) ಪದವಿಯನ್ನು ಚಿನ್ನದ ಪದಕದೊಂದಿಗೆ 1976ರಲ್ಲಿ ಪೂರೈಸಿದರು.

“ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು”, “ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ”, “ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ”, “ಮಧುವನ ಕರೆದರೆ ತನು ಮನ ಸೆಳೆದರೆ”, “ನಿಂತಲ್ಲೆ ಹಾಳಾದೆ ನಿನ್ನಿಂದಲೇ” ಮುಂತಾದ ಅಷ್ಟೂ ಹೃದಯಸ್ಪರ್ಶಿ ಚಲನಚಿತ್ರ ಗೀತಗಳ ಮೂಲಕ 2006ರಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹೆಜ್ಜೆ ಹಾಕಿದ್ದಾರೆ.

ಜಯಂತ್ ಅವರ ಸಾಹಿತ್ಯಪ್ರಯಾಣ 1970ರಿಂದ ಪ್ರಾರಂಭವಾಗಿದ್ದು, ಅವರು ಕವಿ, ಸಣ್ಣಕಥೆಗಾರ, ನಾಟಕಕಾರ ಮತ್ತು ಅಂಕಣಕಾರನಾಗಿ ಗುರುತಿಸಿಕೊಂಡಿದ್ದಾರೆ. 1974ರಲ್ಲಿ, ಕೇವಲ 19ನೇ ವಯಸ್ಸಿನಲ್ಲಿ, “ರಂಗದಿಂದೊಂದಿಷ್ಟು ದೂರ” ಕವನ ಸಂಕಲನಕ್ಕಾಗಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಅವರು, ಅಸಾಧಾರಣ ಪ್ರತಿಭೆಯಾಗಿ ಮೆರೆದಿದ್ದಾರೆ. ಯಶವಂತ ಚಿತ್ತಾಲರ ಪ್ರಭಾವ ಅವರ ಬರಹದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಜನಸಾಮಾನ್ಯರ ಮಾತುಗಳನ್ನು ಕಲ್ಪಿತ ಸಾಹಿತ್ಯದ ಸುಂದರ ಹಾರವಾಗಿ ಜೋಡಿಸುವಲ್ಲಿ ಅವರ ವಿಶೇಷತೆ ಗುರುತಿಸಲ್ಪಟ್ಟಿದೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ತಮ್ಮ ಕಲಾವಿಸ್ತಾರವನ್ನು ತೋರಿದ ಜಯಂತ್, ಮೂರು ಬಾರಿ ರಾಜ್ಯಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Books By Jayant Kaikini