ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ಅವರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು. ಇಳಿಸಂಜೆಯ ಬಿಸಿಲು, ಬಿಸಿಲುಕೋಲು, ಪಾತರಗಿತ್ತಿ, ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ, ಮೆಲುದನಿಯ ವ್ಯಕ್ತಿತ್ವ ಅವರದು.
ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ, ಸಂಭಾಷಣೆಗಾರನಾಗಿ, ಅಂಕಣಕಾರನಾಗಿ, ನಾಟಕಕಾರನಾಗಿ, ಕಥೆಗಾರನಾಗಿ ಕನ್ನಡಿಗರ (ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ) ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ.
ಜಯಂತ್ ಗೌರೀಶ ಕಾಯ್ಕಿಣಿ ‘ಶ್ರೀಮತಿ ಶಾಂತಾ ಕಾಯ್ಕಿಣಿ’ ದಂಪತಿಗಳ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ೨೪ ಜನವರಿ ೧೯೫೫ ರಂದು ಜನಿಸಿದರು. ಅವರ ತಂದೆ ಹೆಸರಾಂತ ಸಾಹಿತಿ, ವೃತ್ತಿಯಲ್ಲಿ ಅಧ್ಯಾಪಕರು ಕೂಡ. ತಾಯಿಯವರು ಒಬ್ಬ ಅಧ್ಯಾಪಕಿ, ಹಾಗೂ ಸಮಾಜಸೇವಕಿ. ಜಯಂತ ಕಾಯ್ಕಿಣಿಯವರು ತಮ್ಮ ಪ್ರೈಮರಿ ಮತ್ತು ಹೈಸ್ಕೂಲ್ ಶಾಲಾ ಶಿಕ್ಷಣವನ್ನು ಗೋಕರ್ಣದ “ಭದ್ರಕಾಳಿ ವಿದ್ಯಾಸಂಸ್ಥೆ”ಯಲ್ಲಿ ಪೂರೈಸಿದರು. ಕಾಲೇಜಿನ ಬಿ.ಎಸ್ಸಿ. ತನಕದ ಪದವಿ ಶಿಕ್ಷಣವನ್ನು ಕುಮಟಾದ “ಬಾಳಿಗ ವಿದ್ಯಾಸಂಸ್ಥೆ”ಯಲ್ಲಿ ಪಡೆದುಕೊಂಡರು. ಅ ನಂತರದ ಉನ್ನತ ಶಿಕ್ಷಣವನ್ನು ‘ಎಂ.ಎಸ್ಸಿ ಬಯೋಕೆಮಿಸ್ಟ್ರಿ’ಯಲ್ಲಿ, ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ, ಚಿನ್ನದ ಪದಕ ಗಳಿಸುವುದರೊಂದಿಗೆ ೧೯೭೬ರಲ್ಲಿ ಪೂರೈಸಿದರು.”ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು”, “ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ”, “ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ”, “ಮಧುವನ ಕರೆದರೆ ತನು ಮನ ಸೆಳೆದರೆ”, “ನಿಂತಲ್ಲೆ ಹಾಳಾದೆ ನಿನ್ನಿಂದಲೇ”, ಎನ್ನುತ್ತಾ ೨೦೦೬ ರ ವರುಷದಿಂದೀಚಿಗೆ, ಕನ್ನಡ ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟ ಕವಿಯಾಗಿ ಪ್ರಖ್ಯಾತರಾಗಿದ್ದಾರೆ.
ಶ್ರೀ ಕಾಯ್ಕಿಣಿಯವರ ಬರಹದ ಆಸಕ್ತಿ ಶುರುವಾಗಿದ್ದು ೧೯೭೦ ರಿಂದ. ಆಗಲೇ ಅವರು ಕವಿ, ಸಣ್ಣ ಕಥೆಗಳ ಬರಹಗಾರ, ನಾಟಕಕಾರ ಮತ್ತು ಅಂಕಣಕಾರ ಹೀಗೆ ನಾನಾ ರೂಪಧಾರಿ. ಕನ್ನಡ ಸಾಹಿತ್ಯದಲ್ಲಿ ಮೇರು ಪ್ರಶಸ್ತಿಯೆಂದು ಹೆಸರಾದ “ರಾಜ್ಯ ಸಾಹಿತ್ಯ ಅಕಾಡೆಮಿ”ಯ ಪುರಸ್ಕಾರವು, ಶ್ರೀ ಜಯಂತರವರಿಗೆ, ತಮ್ಮ ೧೯ನೇಯ ವಯಸ್ಸಿನಲ್ಲಿಯೇ, “ರಂಗದಿಂದೊಂದಿಷ್ಟು ದೂರ” ಎಂಬ ಕವನಸಂಕಲನಕ್ಕೆ ೧೯೭೪ರಲ್ಲಿ ಪ್ರಥಮ ಬಾರಿಗೆ ದೊರಕಿತು. ಅಸಾಧಾರಣ, ಅಭಿಜಾತ ಪ್ರತಿಭೆ ಅವರದು. ತಂದೆಯೇ ಅವರಿಗೆ ಆದರ್ಶಪ್ರಾಯ, ಅವರೊಂದಿಗೆ ಯಶವಂತ ಚಿತ್ತಾಲರವರೂ ಸಹ ಜಯಂತರ ಮೇಲೆ ಬಹಳ ಪ್ರಭಾವ ಬೀರಿರುವರು. ಜನಸಾಮಾನ್ಯರ ಆಡುಭಾಷೆಗಳಲ್ಲಿ ಬರುವ ಪದಗಳನ್ನು ಮುತ್ತಿನ ಮಣಿಗಳಂತೆ ಜೋಡಿಸಿ, ಜನರ ಮನಸ್ಸಿನ ಆಳಕ್ಕೆ ಇಳಿಯುವಂತೆ ಸುಂದರ ಪದಮಾಲೆಗಳನ್ನು ಕಟ್ಟುವುದರಲ್ಲಿ ಕಾಯ್ಕಿಣಿಯವರು ನಿಷ್ಣಾತರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ನಾಣ್ಣುಡಿಯಂತೆ, ಸಾಹಿತ್ಯಗಳಲ್ಲಿ ಇವರು ಬರೆಯದ ಪ್ರಕಾರಗಳಿಲ್ಲ. ತಮ್ಮ ಸಾಹಿತ್ಯ ರಚನೆಗಳಿಗಾಗಿ ಮೂರು ಸಲ ರಾಜ್ಯಪ್ರಶಸ್ತಿ ಗಳಿಸಿದರು.