Hariprakash Konemane

Hariprakash Konemane

ಅನುಭವಿ ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ಅವರದ್ದು ಗ್ರಾಮ್ಯ ಹಿನ್ನೆಲೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮದ ಶ್ರೀ ವೆಂಕಟರಮಣ ಕೋಣೆಮನೆ ಮತ್ತು ಶ್ರೀಮತಿ ಪಾರ್ವತಿ ಅವರ ಮಗನಾಗಿ ಜನಿಸಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನಂದೊಳ್ಳಿ ಹಾಗೂ ಯಲ್ಲಾಪುರದಲ್ಲಿ ಪೂರ್ಣಗೊಳಿಸಿದರು.
ಶಿರಸಿಯ ಎಂ ಎಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪದವಿ ಪೂರೈಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದರು.
ಬಾಲ್ಯದಿಂದಲೂ ಅವರಿಗೆ ನಾಗರಿಕ ಸೇವಾಕ್ಷೇತ್ರದಲ್ಲಿ ವಿಶೇಷ ಆಸಕ್ತಿಯಿತ್ತು. ಎರಡು ವರ್ಷಗಳ ಕಾಲ ಹೈದರಾಬಾದ್‌, ದೆಹಲಿ ಮತ್ತು ಬೆಂಗಳೂರಿನಲ್ಲಿದ್ದು, ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳಿಗೆ ತಯಾರಿ ನಡೆಸಿದರು. ಪತ್ರಿಕೋದ್ಯಮದ ಬಗ್ಗೆ ತಮಗೆ ಪ್ರಬಲವಾದ ಸೆಳೆತವಿರುವುದು ಈ ದಿನಗಳಲ್ಲಿ ಇವರ ಅರಿವಿಗೆ ಬಂತು. ದೇಶದ ಹಳೆಯ ಮತ್ತು ಪ್ರಮುಖ ಪತ್ರಿಕೆಗಳಲ್ಲಿ ಒಂದಾದ ಸಂಯುಕ್ತ ಕರ್ನಾಟಕ ದೈನಿಕದ ಮೂಲಕ ಅವರು ಪತ್ರಿಕೋದ್ಯಮದಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಉಪ ಸಂಪಾದಕರಾಗಿ ಕೆಲಸ ಆರಂಭಿಸಿದ ಕೆಲವೇ ತಿಂಗಳುಗಳಲ್ಲಿ, ಈ ಪತ್ರಿಕೆಯ ಎಲ್ಲಾ ಆವೃತ್ತಿಗಳ ಸುದ್ದಿ ಸಮನ್ವಯಕಾರರ ಹುದ್ದೆಗೇರಿದರು.
ವಿಆರ್‌ಎಲ್‌ ಮಾಧ್ಯಮ ಸಮೂಹವು, 2005ರಲ್ಲಿ ಪ್ರತಿಷ್ಠಿತ ಉಷಾ ಕಿರಣ ದಿನಪತ್ರಿಕೆ ಆರಂಭಿಸಿದಾಗ, ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥರಾಗಿ ಹರಿಪ್ರಕಾಶ್‌ ಕಾರ್ಯಭಾರ ವಹಿಸಿಕೊಂಡರು. ಈ ಹೊಸ ಪತ್ರಿಕೆಯ ಪ್ರಸರಣ ರಾಜ್ಯದೆಲ್ಲೆಡೆ ಪಸರಿಸುವಂತೆ ಮಾಡುವಲ್ಲಿ ಹರಿಪ್ರಕಾಶ್‌ ಇವರ ಪಾತ್ರ ಮಹತ್ವದ್ದಾಗಿತ್ತು. ಅಂದಿನ ಕನ್ನಡ ಪತ್ರಿಕೋದ್ಯಮಕ್ಕೆ ವಿನೂತನ ಎಂಬಂತೆ, ಇಡೀ ಉಷಾಕಿರಣ ಪತ್ರಿಕೆಯ ಆಡಳಿತ ವಿಭಾಗವನ್ನು ಕಾಗದ-ರಹಿತವಾಗಿ ಪರಿವರ್ತಿಸಿದ್ದು, ಅವರ ದೂರದರ್ಶಿತ್ವ ಮತ್ತು ಅನುಷ್ಠಾನ ಸಾಮರ್ಥ್ಯಕ್ಕೆ ಸಾಕ್ಷಿ. ನಂತರ, ಟೈಮ್ಸ್‌ ಆಫ್‌ ಇಂಡಿಯಾ ದೈನಿಕದ ಕನ್ನಡ ದಿನಪತ್ರಿಕೆ ಆರಂಭಗೊಂಡಾಗ, ಅದರ ಬೆಂಗಳೂರು ಆವೃತ್ತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
2011ರಲ್ಲಿ, ವಿಆರ್‌ಎಲ್‌ ಮಾಧ್ಯಮ ಸಮೂಹಕ್ಕೆ ಹಿಂದಿರುಗಿದ ಹರಿಪ್ರಕಾಶ್‌, ವಿಜಯವಾಣಿ ಪತ್ರಿಕೆಯ ಸಹಾಯಕ ಸಂಪಾದಕರಾಗಿ ನಿಯುಕ್ತರಾದರು. ಸಂಸ್ಥಾಪನಾ ದಿನಗಳಿಂದಲೇ ಈ ದೈನಿಕದ ಒಡನಾಟ ಇದ್ದುದರಿಂದ, ಪತ್ರಿಕೆಯ ಹತ್ತೂ ಆವೃತ್ತಿಗಳಲ್ಲಿ ನುರಿತ ಪತ್ರಕರ್ತರ ತಂಡವನ್ನು ಕಟ್ಟಿದರು. ಹರಿಪ್ರಕಾಶ್‌ ಅವರ ಮುಂದಾಳತ್ವದಲ್ಲಿ 400 ಪತ್ರಕರ್ತರು ವಹಿಸಿದ ಶ್ರಮದಿಂದ, ಎರಡೇ ವರ್ಷಗಳಲ್ಲಿ ಈ ಪತ್ರಿಕೆ ರಾಜ್ಯದ ನಂಬರ್‌ 1 ದಿನಪತ್ರಿಕೆಯಾಯಿತು. ಇವರ ವೃತ್ತಿ ಜೀವನದ ಮಹತ್ವದ ಮೈಲುಗಲ್ಲುಗಳಲ್ಲಿ ಇದೂ ಒಂದು. 2014ರ ಫೆಬ್ರವರಿ 28ರಂದು, ವಿಜಯವಾಣಿಯ ಸ್ಥಾಪಕ ಸಂಪಾದಕ ತಿಪ್ಪಮ್ಮ ಭಟ್‌ ಅವರು ನಿವೃತ್ತರಾದ ನಂತರ, ಅವರ ಸ್ಥಾನಕ್ಕೆ ಹರಿಪ್ರಕಾಶ್‌ ಸಹಜ ಆಯ್ಕೆಯಾದರು. ರಾಜ್ಯವ್ಯಾಪಿ ಪ್ರಸಾರವಿರುವ ದಿನಪತ್ರಿಕೆಯೊಂದರ ಸಂಪಾದಕರಾಗಿ 39 ವರ್ಷದಷ್ಟು ಕಿರಿಯ ವಯಸ್ಸಿನಲ್ಲೇ ನಿಯುಕ್ತರಾದರು.
ದೇಶಕಾಲ: ಸಂಯುಕ್ತ ಕರ್ನಾಟಕ ದೈನಿಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಅಂಕಣ, ನಂತರ ಎರಡು ಭಾಗಗಳಲ್ಲಿ ಸಂಕಲಿತವಾಗಿದೆ.
ಕಮೆಂಟರಿ: ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ಈ ಜನಮೆಚ್ಚಿದ ಅಂಕಣ 300ಕ್ಕೂ ಹೆಚ್ಚು ಬರಹಗಳಲ್ಲಿ ಮೂಡಿಬಂದಿದೆ.
ವಿಸ್ತಾರ: ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಅತಿ ಜನಪ್ರಿಯ ಅಂಕಣ. ಇದರ 150 ಲೇಖನಗಳನ್ನು ಎರಡು ಭಾಗಗಳಲ್ಲಿ ಪ್ರಕಟಿಸಲಾಗಿದೆ.
ಪ್ರಶಸ್ತಿ ಮತ್ತು ಗೌರವಗಳು
2017ರಲ್ಲಿ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿ
2019ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರ
2019 ಮತ್ತು 2020ರ ಸಾಲಿನಲ್ಲಿ ಟೈಮ್ಸ್‌ ಆಫ್‌ ಇಂಡಿಯಾ ಚೇರ್‌ಮನ್‌ ಪ್ರಶಸ್ತಿ
2023ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ

Books By Hariprakash Konemane