Gorur Ramaswamy Iyengar

Gorur Ramaswamy Iyengar

ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಜುಲೈ ೪, ೧೯೦೪ – ಸೆಪ್ಟೆಂಬರ್ ೨೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಆರ್.ಕೆ.ನಾರಾಯಣ್ ಓದುಗರಿಗೆ ಮಾಲ್ಗುಡಿಯನ್ನು ಪರಿಚಯಿಸುವುದಕ್ಕೆ ಮುನ್ನವೇ ತಮ್ಮ ಕೃತಿಗಳ ಮೂಲಕ ರಾಮಸ್ವಾಮಿ ಅಯ್ಯಂಗಾರ್ ರವರು ಗೊರೂರು ಗ್ರಾಮವನ್ನು ಪರಿಚಯಿಸಿದ್ದರು. ಕಾವ್ಯನಾಮ – ಸೀತಾತನಯ . ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ.
ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು 1904ರ ಜುಲೈ 4ರಂದು ಹಾಸನ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷಮ್ಮ. ತಮ್ಮ ಹಳ್ಳಿಯಲ್ಲಿ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ಗೊರೂರರು ಹಾಸನದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಗಾಂಧೀಜಿಯವರ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದರು. ಅನಂತರ ಅವರು ಗಾಂಧೀಜಿಯ ಆಶ್ರಮವನ್ನು ಸೇರಿ, ಗುಜರಾತಿನ ವಿದ್ಯಾಪೀಠದ ವಿದ್ಯಾರ್ಥಿಯಾದರು. ಬಳಿಕ ಮದ್ರಾಸಿನ ‘ಲೋಕಮಿತ್ರ’ ಮತ್ತು ‘ಭಾರತಿ’ ಪತ್ರಿಕೆಗಳ ಕನ್ನಡ ಸಮಾಚಾರ ಲೇಖಕರಾಗಿ ಸ್ವಲ್ಪಕಾಲ ಕೆಲಸಮಾಡಿ, ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿದರು. ಹರಿಜನೋದ್ಧಾರ ಅದರ ಮುಖ್ಯ ಕಾರ್ಯವಾಗಿತ್ತು. ಅದನ್ನು ಗೊರೂರರು ಶ್ರದ್ಧೆಯಿಂದ ನಿರ್ವಹಿಸಿದರು. ಆಮೇಲೆ ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಖಾದಿ ವಸ್ತ್ರಾಲಯದ ಸಂಚಾಲಕರಾದರು. ಅಲ್ಲಿಯೇ ಅವರ ಸಾಹಿತ್ಯ ಸೇವೆ ಮೊದಲಾಯಿತು. 1933ರಲ್ಲಿ ಗೊರೂರರು ತಮ್ಮ ಗ್ರಾಮಕ್ಕೆ ಮರಳಿ, ಮೈಸೂರು ಗ್ರಾಮ ಸೇವಾಸಂಘವನ್ನು ಸ್ಥಾಪಿಸಿ, ಖಾದಿ ಪ್ರಚಾರ, ಹರಿಜನೋದ್ಧಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆಗಳು ಮುಂತಾದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿದರು. 1942ರ ‘ಚಲೇ ಜಾವ್’ ಚಳವಳಿಯಲ್ಲಿ ಅವರು ಭಾಗವಹಿಸಿ, ತುರಂಗವಾಸವನ್ನು ಅನುಭವಿಸಿದರು. ಸ್ವಾತಂತ್ರ್ಯ ಬಂದ ಮೇಲೆ ಮೈಸೂರಿನಲ್ಲಿ ಪ್ರಜಾ ಸರ್ಕಾರ ಸ್ಥಾಪನೆಗಾಗಿ ನಡೆದ ಚಳವಳಿಯಲ್ಲೂ ಭಾಗವಹಿಸಿದರು. ಅದು ಸ್ಥಾಪಿತವಾದ ಮೇಲೆ ಸುಮಾರು ಹನ್ನೆರಡು ವರ್ಷಗಳ ಕಾಲ ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿದ್ದರು.
ಕಾದಂಬರಿಗಳು: ಹೇಮಾವತಿ (ಚಲನಚಿತ್ರ), ಪುನರ್ಜನ್ಮ, ಮೆರವಣಿಗೆ, ಊರ್ವಶಿ, ಕನ್ಯಾಕುಮಾರಿ ಮತ್ತು ಇತರ ಕತೆಗಳು, ರಾಜನರ್ತಕಿ.
ಕಥೆಗಳು: ಭೂತಯ್ಯನ ಮಗ ಅಯ್ಯು, ಕೋರ್ಟಿನಲ್ಲಿ ಗೆದ್ದ ಎತ್ತು
ಅನುವಾದಗಳು: ಮಲೆನಾಡಿನವರು, ಭಕ್ತಿಯೋಗ, ಭಗವಾನ್ ಕೌಟಿಲ್ಯ
ಸಂಕಲನ: ಹೊಸಗನ್ನಡ ಪ್ರಬಂಧ ಸಂಕಲನ
ಪ್ರಶಸ್ತಿ, ಗೌರವಗಳು:೧೯೭೪ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು.
೧೯೮೦ರಲ್ಲಿ ಅಮೇರಿಕಾದಲ್ಲಿ ಗೊರೂರು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿತು.
೧೯೮೨ರಲ್ಲಿ ಸಿರ್ಸಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೯೫ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿ – ಊರ್ವಶಿ ಚಿತ್ರಕ್ಕಾಗಿ (ಮರಣೋತ್ತರ)
ದೇವರಾಜ ಬಹದ್ದೂರ್ ಪ್ರಶಸ್ತಿ
ಅಭಿಮಾನಿಗಳು ಅರ್ಪಿಸಿದ ಗ್ರಂಥ- ಗೊರೂರು ಗೌರವ ಗ್ರಂಥ, ಸಂಸ್ಮರಣ ಗ್ರಂಥ , ಹೇಮಾವತಿಯ ಚೇತನ.
ಗೊರೂರರ ಬರವಣಿಗೆ ಅಪರೂಪದ್ದು ಮತ್ತು ಅವರಿಗೇ ಅನುರೂಪವಾದದ್ದು. ಗೊರೂರರು ಸೆಪ್ಟೆಂಬರ್ ೨೮, ೧೯೯೧ರಂದು ನಿಧನರಾದರು. ಮತ್ತೊಬ್ಬ ಗೊರೂರರು ನಮ್ಮಲ್ಲಿಲ್ಲ; ಅವರು ಚಿತ್ರಿಸಿದಂಥ ಸಮಾಜವೂ ಈಗ ಉಳಿದಿಲ್ಲ. ಆದರೆ ಅವರು ಉಳಿಸಿ ಹೋಗಿರುವ ಅನುಭವ ಶ್ರೇಷ್ಠತೆ ನಮಗೆ ಆಸ್ತಿಯಾಗಿ ಉಳಿದಿದೆ.

Books By Gorur Ramaswamy Iyengar