ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಜುಲೈ 4, 1904 – ಸೆಪ್ಟೆಂಬರ್ 28, 1991) ಕನ್ನಡ ಸಾಹಿತ್ಯದಲ್ಲಿ ಅಪರೂಪದ ಛಾಪು ಮೂಡಿಸಿದ ಪ್ರಮುಖ ಸಾಹಿತಿಯಾಗಿದ್ದರು. ಆರ್.ಕೆ.ನಾರಾಯಣ್ ತಮ್ಮ ಮಾಲ್ಗುಡಿ ಲೋಕವನ್ನು ಓದುಗರಿಗೆ ಪರಿಚಯಿಸುವ ಮೊದಲು, ಗೊರೂರು ತಮ್ಮ ಸಾಹಿತ್ಯದ ಮೂಲಕ ಗೊರೂರು ಗ್ರಾಮವನ್ನು ಸೃಷ್ಟಿಸಿದರು. ಅವರು “ಸೀತಾತನಯ” ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದು, ಸ್ವಾತಂತ್ರ್ಯ ಹೋರಾಟ, ಮೈಸೂರು ಪ್ರಜಾ ಸರ್ಕಾರದ ಚಳುವಳಿ ಮತ್ತು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಹಾಸನ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಜನಿಸಿದ ಅವರು, ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ತ್ಯಜಿಸಿ, ಗಾಂಧೀಜಿಯವರ ಆಶಯಗಳಿಗೆ ಸಮರ್ಪಿತವಾದ ಬದುಕನ್ನು ನಡೆಸಿದರು. ‘ಲೋಕಮಿತ್ರ’ ಮತ್ತು ‘ಭಾರತಿ’ ಪತ್ರಿಕೆಗಳಲ್ಲಿ ಕನ್ನಡ ಸಮಾಚಾರ ಲೇಖಕರಾಗಿ ಸೇವೆ ಸಲ್ಲಿಸಿದ ಅವರು, ಕೆಂಗೇರಿಯ ಗುರುಕುಲಾಶ್ರಮದಲ್ಲಿಯೂ ಕೆಲಸ ಮಾಡಿದರು. ಹರಿಜನೋದ್ಧಾರ ಮತ್ತು ಗ್ರಾಮೋನ್ನತಿಯ ಕಾರ್ಯದಲ್ಲಿ ಅಪಾರ ಶ್ರಮ ವಹಿಸಿದ ಗೊರೂರು, ಬೆಂಗಳೂರು ಅಖಿಲ ಭಾರತ ಚರಕ ಸಂಘದ ಖಾದಿ ವಸ್ತ್ರಾಲಯದಲ್ಲಿ ಸಂಚಾಲಕರಾಗಿ ಸೇವೆ ಸಲ್ಲಿಸಿದರು. 1942ರ ‘ಚಲೇ ಜಾವೋ’ ಚಳವಳಿಯಲ್ಲಿ ಭಾಗವಹಿಸಿ ತುರಂಗವಾಸ ಅನುಭವಿಸಿದ ಅವರು, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮೈಸೂರು ಪ್ರಜಾ ಸರ್ಕಾರದ ಸ್ಥಾಪನೆಗಾಗಿ ನಡೆದ ಹೋರಾಟದಲ್ಲೂ ಸಕ್ರಿಯರಾಗಿದ್ದರು. ಅವರು ರಾಜ್ಯ ವಿಧಾನಪರಿಷತ್ತಿನಲ್ಲಿ ಹನ್ನೆರಡು ವರ್ಷಗಳ ಕಾಲ ಸದಸ್ಯರಾಗಿದ್ದರು.
ಕೃತಿಗಳು:
ಕಾದಂಬರಿಗಳು: ಹೇಮಾವತಿ, ಪುನರ್ಜನ್ಮ, ಮೆರವಣಿಗೆ, ಊರ್ವಶಿ, ಕನ್ಯಾಕುಮಾರಿ ಮತ್ತು ಇತರ ಕತೆಗಳು, ರಾಜನರ್ತಕಿ.
ಕಥೆಗಳು: ಭೂತಯ್ಯನ ಮಗ ಅಯ್ಯು, ಕೋರ್ಟಿನಲ್ಲಿ ಗೆದ್ದ ಎತ್ತು.
ಅನುವಾದಗಳು: ಮಲೆನಾಡಿನವರು, ಭಕ್ತಿಯೋಗ, ಭಗವಾನ್ ಕೌಟಿಲ್ಯ.
ಸಂಕಲನ: ಹೊಸಕನ್ನಡ ಪ್ರಬಂಧ ಸಂಕಲನ.
ಗೌರವಗಳು:
1974 – ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್.
1980 – ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
1982 – ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
1995 – ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ (ಮರಣೋತ್ತರ) – ಊರ್ವಶಿ ಚಿತ್ರಕ್ಕಾಗಿ.
ದೇವರಾಜ ಬಹದ್ದೂರ್ ಪ್ರಶಸ್ತಿ.
ಸ್ಮರಣೀಯ ಗ್ರಂಥಗಳು: ಗೊರೂರು ಗೌರವ ಗ್ರಂಥ, ಸಂಸ್ಮರಣ ಗ್ರಂಥ, ಹೇಮಾವತಿಯ ಚೇತನ.
ಗೊರೂರರ ಬರವಣಿಗೆ ವೈಶಿಷ್ಟ್ಯಪೂರ್ಣವಾಗಿದ್ದು, ಅವರ ಸಾಹಿತ್ಯ ಕನ್ನಡಿಗರಿಗೆ ಅಮೂಲ್ಯ ಕೊಡುಗೆಯಾಗಿದೆ. 1991ರ ಸೆಪ್ಟೆಂಬರ್ 28ರಂದು ಅವರು ನಮ್ಮನ್ನು ಅಗಲಿದರೂ, ಅವರ ಸಾಹಿತ್ಯ ಸದಾಕಾಲ ಕನ್ನಡಿಗರ ಹೃದಯದಲ್ಲಿ ಉಳಿಯಲಿದೆ.