ಜಿ.ಎನ್. ಉಪಾಧ್ಯ ಉಡುಪಿ ಜಿಲ್ಲೆಯ ಕೋಟ ಮೂಲದವರು. ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಮುಂಬೈ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಮತ್ತು ಪ್ರಥಮ ರ್ಯಾಂಕ್ನೊಂದಿಗೆ ಪಡೆದಿದ್ದಾರೆ. “ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ” ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದ ಉಪಾಧ್ಯ, ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಭಾಷಾ ವಿಜ್ಞಾನ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ.
‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಅವರು, “ಸೊಲ್ಲಾಪುರ: ಒಂದು ಸಾಂಸ್ಕೃತಿಕ ಅಧ್ಯಯನ,” “ಮಹಾರಾಷ್ಟ್ರದ ಕನ್ನಡ ಶಾಸನಗಳ ವರ್ಣನಾತ್ಮಕ ಸೂಚಿ,” “ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು,” “ಮಹಾರಾಷ್ಟ್ರ-ಕರ್ನಾಟಕ ಸಾಂಸ್ಕೃತಿಕ ಬಾಂಧವ್ಯ” ಮೊದಲಾದ ಮಹತ್ವದ ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಶಿಕ್ಷಣ ಇಲಾಖೆ, ರಾಜ್ಯ ಪಠ್ಯಪುಸ್ತಕ ಮಂಡಳಿ, ಮತ್ತು ಗುಪ್ತಚರ ಇಲಾಖೆಯಲ್ಲಿ ವಿಷಯ ತಜ್ಞರಾಗಿ ಹಾಗೂ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿರುವ ಉಪಾಧ್ಯ ಅವರಿಗೆ, ಚಿತ್ರದುರ್ಗದ ಮುರುಘಾಮಠದಿಂದ ‘ಶಿಕ್ಷಣ ವಿಭೂಷಣ’ ಪ್ರಶಸ್ತಿ ದೊರೆತಿದೆ. ಅವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ಶಾಂತಿಲಾಲ್’ ಪ್ರಶಸ್ತಿಯು ದೊರೆತಿದ್ದು, ‘ಮಹಾರಾಷ್ಟ್ರ-ಕರ್ನಾಟಕ ಆದಾನ-ಪ್ರದಾನ’ ಕೃತಿಗೆ ಗದ್ಯ ವಿಭಾಗದಲ್ಲಿ ‘ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಬಹುಮಾನ’ ಸಂದಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ 77ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರ ಕನ್ನಡ ಸೇವೆಯನ್ನು ಗೌರವಿಸಲಾಯಿತು. ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿಯೂ ಅವರಿಗೆ ಲಭಿಸಿದೆ. ಅವರು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಪುಸ್ತಕ ವಿಮರ್ಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಮುಂಬೈನಲ್ಲಿಯೇ ‘ಅಭಿಜಿತ್ ಪ್ರಕಾಶನ’ ಸ್ಥಾಪಿಸಿ ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಡಾ. ಉಪಾಧ್ಯ ಅವರ 60ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿದ್ದು, ಅವರ ಮಾರ್ಗದರ್ಶನದಲ್ಲಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಗಳಿಸಿದ್ದಾರೆ. ಪ್ರಸ್ತುತ ಅವರು ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.