ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಜ್ಞಾನ ಆಯೋಗದ ಸಲಹೆಗಾರರಾಗಿದ್ದಾಗ “ಕಣಜ’ ಅಂತರ್ಜಾಲ ತಾಣದ ಸಮಾಲೋಚಕರಾಗಿ ಅದನ್ನು ರೂಪಿಸಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿರುವ ಕನ್ನಡೇತರರಿಗೆ ಕನ್ನಡ ಮಾತನಾಡುವುದನ್ನು ಕಲಿಸಿದ್ದಾರೆ. ಸಾಹಿತ್ಯ, ಐಟಿ ಕ್ಷೇತ್ರ ಮತ್ತು ಪತ್ರಿಕೋದ್ಯಮ (ಪ್ರಜಾವಾಣಿ)ದಲ್ಲಿ ಅನುಭವವಿರುವ ಇವರು ಸ್ವತಂತ್ರ ಲೇಖಕರಾಗಿ ಜೀವನ ನಡೆಸುತ್ತಿದ್ದಾರೆ. ವಿಮರ್ಶೆ, ಸಂಶೋಧನೆ, ಅನುವಾದ, ಸಂಪಾದನೆ, ಜೀವನಚರಿತ್ರೆಯ ಪುಸ್ತಕಗಳನ್ನು ಹೊರತಂದಿದ್ದಾರೆ.