ಡಾ. ಸೋಮೇಶ್ವರ್, ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ಫ್ರತಿದಿನ ತಪ್ಪದೆ ‘ಉತ್ಸಾಹ ಹಾಗೂ ಕ್ರಮಬದ್ಧತೆ’ಯಿಂದ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮ ೪,000 ಕಂತುಗಳನ್ನು ದಾಟಿ ಮುಂದುವರೆದು ಭಾರತದ ಟೆಲಿವಿಷನ್ ಇತಿಹಾಸದಲ್ಲೇ ಒಂದು ದಾಖಲೆಯನ್ನು ಸೃಷ್ಟಿಸಿದೆ. ಇವರು ವೃತ್ತಿಯಿಂದ ವೈದ್ಯರಾಗಿದ್ದಾರೆ. ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.
ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮದ ಮೂಲಕ ಜನರ ಹೃದಯ ತಟ್ಟಿದವರು. ‘ಜೀವನಾಡಿ’ ಆರೋಗ್ಯ ಮಾಸಿಕದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಬರವಣಿಗೆಗೆ ಮತ್ತು ಉಪನ್ಯಾಸಗಳೆರಡರಲ್ಲಿಯೂ ತಮ್ಮದೇ ಆದ ಶೈಲಿ ರೂಢಿಸಿಕೊಂಡವರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ವೈದ್ಯವಿಶ್ವಕೋಶದಲ್ಲಿ ಇವರು ಬರೆದ ಅನುವಂಶಿಕ ರೋಗಗಳನ್ನು ಕುರಿತು ಲೇಖನಗಳು ಪ್ರಕಟಗೊಂಡಿವೆ. ಬೆಂಗಳೂರು ದೂರದರ್ಶನದಲ್ಲಿ ವಿಜ್ಞಾನ ಹಾಗೂ ಆರೋಗ್ಯದ ಕುರಿತು ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಆಕಾಶವಾಣಿಯಲ್ಲಿಯೂ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಸೋಮೇಶ್ವರ್ ಅವರು ನಾರಪ್ಪ ಹಾಗೂ ತಾಯಿ ಅಂಜನಾರವರ ಮಗನಾಗಿ ೧೪ ಮೇ ೧೯೫೫ ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ‘ಜೀವನಂದಿ’ ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆ ಸಲಹೆಗಾರರಾಗಿದ್ದಾರೆ. ಸೋಮೇಶ್ವರ್ ಅವರ ಪತ್ನಿ ರುಕ್ಮಾವತಿ.
ಡಾ|| ನಾ. ಸೋಮೇಶ್ವರರವರು ಮೂಢನಂಬಿಕೆಗಳ ನಿವಾರಣೆ, ಆರೋಗ್ಯ ಜಾಗೃತಿ, ಏಡ್ಸ್ ಕುರಿತು ಅನೇಕ ಸಂಘ-ಸಂಸ್ಥೆ, ಕಾಲೇಜುಗಳಲ್ಲಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಅಸ್ಟ್ರಾಜೆನಿಕ್ ಫಾರ್ಮಾ ಇಂಡಿಯಾ ಲಿಮಿಟೆಡ್ ಸಂಸ್ಥೆಯುಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.