ಕನ್ನಡದಲ್ಲಿ ಶ್ರೇಷ್ಠ ವಿದ್ವಾಂಸರಾಗಿ ಹಳಗನ್ನಡದಲ್ಲಿ ಪ್ರಭುತ್ವ ಪಡೆದಿದ್ದ ಎಲ್. ಬಸವರಾಜು ಅವರು ಕೋಲಾರದ ಇಡಗೂರಿನಲ್ಲಿ 1919ರ ಅಕ್ಟೋಬರ್ 7ರಂದು ಜನಿಸಿದರು. ತಂದೆ ಲಿಂಗಪ್ಪ- ತಾಯಿ ಈರಮ್ಮ. ಬಾಲ್ಯದಲ್ಲಿ ಬಡತನದ ಬವಣೆಯಿಂದ ಊರಿನ ಭೀಮೇಶ್ವರ ದೇಗುಲದಲ್ಲಿ ಅರ್ಚಕರಾಗಿದ್ದರು. ಸಿದ್ಧಗಂಗೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು.
ದಾವಣಗೆರೆ ಡಿ.ಆರ್.ಎಂ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಕೆಲಕಾಲಾನಂತರ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜು, ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಅನಂತರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನಾಡಿನ ಅನೇಕ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ, ಗೌರವಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1977), ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1994), ಚಿದಾನಂದ ಪ್ರಶಸ್ತಿ (1994), ಪಂಪ ಪ್ರಶಸ್ತಿ(2000), ಚಾವುಂಡರಾಯ ಪ್ರಶಸ್ತಿ(2002), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(2000) ಇತ್ಯಾದಿಗಳು ಇವರಿಗೆ ಸಂದಿವೆ. ಸಂಶೋಧಕರಾಗಿ, ಗ್ರಂಥ ಸಂಪಾದಕರಾಗಿ ಇವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅಮೋಘವಾದುದು. ಸರಳ ಪಂಪಭಾರತ (1999), ಪಂಪನ ಆದಿಪುರಾಣ (ಸಂಪಾದನೆ), ರನ್ನನ ಸರಳ ಗದಾಯುದ್ಧ, ಅಲ್ಲಮನ ವಚನ ಚಂದ್ರಿಕೆ(ಸಂಶೋಧನೆ), ಬಸವಣ್ಣನವರ ವಚನಗಳು, ಸರ್ವಜ್ಞನ ವಚನಗಳು, ಕೇಶಿರಾಜನ ಶಬ್ದಮಣಿದರ್ಪಣಂ ಇತ್ಯಾದಿಗಳು ಇವರ ಕೃತಿಗಳು. ಎಲ್. ಬಸವರಾಜು ಅವರು 2012ರ ಜನೆವರಿ 29ರಂದು ನಿಧನರಾದರು.