ಡಾ. ಬಿ. ಜಿ. ಎಲ್. ಸ್ವಾಮಿ (ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ) ಕರ್ನಾಟಕದ ಹಿರಿಯ ವಿಜ್ಞಾನಿ ಮತ್ತು ಸಾಹಿತಿ. ಹಿರಿಯ ವಿದ್ವಾಂಸ, ಚಿಂತನಶೀಲ ಬರಹಗಾರ.
‘ಬಿ.ಜಿ.ಎಲ್.ಸ್ವಾಮಿ’ಯವರು ಕನ್ನಡದ ಪ್ರಸಿದ್ಧ ಸಾಹಿತಿ ಡಿ. ವಿ. ಗುಂಡಪ್ಪನವರ ಏಕಮಾತ್ರ ಪುತ್ರರು. ಮನೆಯಲ್ಲಿ ಸಾಹಿತ್ಯ, ಸಂಗೀತ, ಚಿಂತನಶೀಲತೆ ಗಾಳಿಯಲ್ಲೇ ಬೆರೆತುಹೋಗಿದ್ದವು. ಆದರೆ ಹಣಕಾಸಿನ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಸ್ವಾಮಿಗೆ ಐದು ವರ್ಷವಾಗಿದ್ದಾಗ ಅವರ ತಾಯಿ ತೀರಿಕೊಂಡರು. ಬೆಂಗಳೂರಿನ ಸೆಂಟ್ರಲ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ಸ್ವಾಮಿ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ೧೯೩೯ರಲ್ಲಿ ಸಸ್ಯ ಶಾಸ್ತ್ರವನ್ನು ಅಧ್ಯಯನ ಮಾಡಿ ಬಿಎಸ್‌ಸಿ (ಆನರ್ಸ್) ಪರೀಕ್ಷೆಯಲ್ಲಿ ಮೊದಲ ತರಗತಿ ಪಡೆದರು. ಮನೆಯನ್ನೇ ಸಂಶೋಧನಾಲಯವನ್ನಾಗಿ ಮಾಡಿಕೊಂಡು ಸಾಧಾರಣವಾದ ಉಪಕರಣಗಳನ್ನು ಬಳಸಿಕೊಂಡು, ಸಂಶೋಧನಾ ಲೇಖನಗಳನ್ನು ಬರೆದರು. ಇವು ಹೊರದೇಶಗಳಲ್ಲೂ ಪ್ರಕಟವಾದವು. ೧೯೪೭ ರಲ್ಲಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಡಿ.ಎಸ್ಸಿ ಪದವಿ ಬಂದಿತು. ಅದೇವರ್ಷ ಅಮೆರಿಕದಲ್ಲಿ ವಿಶ್ವವಿಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜಗತ್ಪ್ರಸಿದ್ಧ ಸಸ್ಯವಿಜ್ಞಾನಿ ಪ್ರೊಫೆಸರ್ ಇರ್ವಿಂಗ್ ಬೈಲಿಯ ಹತ್ತಿರ ಸಸ್ಯಶಾಸ್ತ್ರ ಅಧ್ಯಯನಕ್ಕೆ ಹೋಗಲು ಭಾರತ ಸರ್ಕಾರದ ನೆರವು ದೊರೆಯಿತು. ಹತ್ತು ತಿಂಗಳ ಅಧ್ಯಯನದ ನಂತರ ಅವರು ಭಾರತಕ್ಕೆ ಹಿಂದಿರುಗಿದಾಗ ಬೈಲಿ, ನನ್ನ ನಲವತ್ತು ವರ್ಷಗಳ ಅನುಭವದಲ್ಲಿ ಪೂರ್ವದೇಶಗಳಿಂದ ಬಂದ ವಿದ್ಯಾರ್ಥಿಗಳಲ್ಲಿ ಅತ್ಯಂತ ಸಮರ್ಥರು ಡಾ. ಸ್ವಾಮಿ’ ಎಂದು ಬರೆದರು. ಆವರೆಗೆ ಆತ ಯಾರ ಹೆಸರನ್ನೂ ತನ್ನ ಸಂಶೋಧನೆಗಳೊಂದಿಗೆ ಸೇರಿಸಿರಲಿಲ್ಲ, ಆದರೆ ಸ್ವಾಮಿಯ ಹೆಸರನ್ನು ಸೇರಿಸಿದರು. ಮುಂದೆ ಇವರು ಮದ್ರಾಸಿನ (ಈಗಿನ ಚೆನ್ನೈ) ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ, ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು.
ಸ್ವಾಮಿಯವರು ಆಗಿನ ಕಾಲದ, ಭಾರತದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು.೧೯೭೬ರಲ್ಲಿ ಅವರಿಗೆ ಬೀರಬಲ್ ಸಾಹನಿ ಸುವರ್ಣಪದಕ ದ ಗೌರವ ಲಭಿಸಿತು. ೧೯೭೪ರಲ್ಲಿ ರಷ್ಯದ ‘ಲೆನಿನ್‌ಗ್ರಾಡ್‌ನ ಅಂತರಾಷ್ಟ್ರೀಯ ಸಸ್ಯವಿಜ್ಞಾನ ಸಮ್ಮೇಳನ’ದ ಉಪಾಧ್ಯಕ್ಷರು. ಹಾರ್ವರ್ಡ್ ವಿಶ್ವವಿದ್ಯಾನಿಲಯದ `ಅಸೋಸಿಯೇಟ್ ಪ್ರೊಫೆಸರ್’.