ಚೇತನ್ ಭಗತ್ (ಏಪ್ರಿಲ್ ೨೨, ೧೯೭೪) ವಿಶ್ವದಾದ್ಯಂತ ಇಂಗ್ಲಿಷ್ ಓದುಗರ ಅಭಿಮಾನ ಗಳಿಸಿರುವ ಪ್ರಖ್ಯಾತ ಯುವ ಪೀಳಿಗೆಯ ಕಥೆಗಾರರು. ಅವರು ಏಪ್ರಿಲ್ ೨೨, ೧೯೭೪ರ ವರ್ಷದಂದು ನವದೆಹಲಿಯಲ್ಲಿ ಜನಿಸಿದರು.
ಬಹಳಷ್ಟು ಉತ್ತಮ ಬರಹಗಾರರು ತಮ್ಮ ಹೃದಯವನ್ನು ತೆರೆದಿಡುವುದರಲ್ಲಿ ಮತ್ತು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಗೊಳಿಸುವುದರಲ್ಲಿ ಕಲಾತ್ಮಕತೆಯನ್ನು ಹೊರಹೊಮ್ಮಿಸುತ್ತಾರೆ. ಚೇತನ್ ಭಗತ್ ಇವೆರಡನ್ನೂ ಯಶಸ್ವಿಯಾಗಿ ಮಾಡುತ್ತಿದ್ದಾರೆ ಜೊತೆಗೆ ಇವೆರಡಕ್ಕೂ ಮೀರಿದ ಇನ್ನೇನನ್ನೋ ಕೂಡಾ ಮಾಡುತ್ತಿದ್ದಾರೆ. ಚಲನಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಚಲನಚಿತ್ರವಾದ ‘ತ್ರೀ ಈಡಿಯಟ್ಸ್’ ಚಿತ್ರದ ಮೂಲ ಚಿಂತನೆಯ ಆಳ ಚೇತನ್ ಭಗತ್ ಅವರದ್ದು.
ಭಾರತದ ಪ್ರತಿಷ್ಠಿತ ಅಧ್ಯಯನ ಕೇಂದ್ರಗಳಾದ ಐಐಟಿ, ಐಐಮ್ ಗಳಲ್ಲಿ ವಿದ್ಯಾಭ್ಯಾಸದ ಸಾಧನೆ ಮಾಡಿರುವ ಚೇತನ್ ಭಗತ್ ಅವರ ಬುದ್ಧಿವಂತಿಕೆಗೆ ಪ್ರಮಾಣ ಪತ್ರ ಬೇರೇನೂ ಬೇಕಿಲ್ಲ. ಆದರೆ. ಭಾರತದಲ್ಲಿ ಪ್ರತೀ ವರ್ಷ ಅಂತಹ ಸಾವಿರಾರು ಪ್ರತಿಭೆಗಳು ಹೊರಬರುತ್ತವೆ ಎಂಬುದು ಕೂಡಾ ಅಷ್ಟೇ ಸತ್ಯ!. ಶಿವ್ ಖೇರ ಅವರ ‘ಯು ಕ್ಯಾನ್ ವಿನ್’ ಎಂಬ ಪುಸ್ತಕದ ಮೇಲಿರುವ ಒಂದು ವಾಖ್ಯೆ ನೆನಪಾಗುತ್ತದೆ. ‘ಗೆದ್ದವರು ಬೇರೆಯವರು ಮಾಡದಿರುವ ವಿಶೇಷವಾದದ್ದೇನನ್ನೂ ಮಾಡುವುದಿಲ್ಲ, ಅವರು ಬೇರೆಯವರು ಮಾಡುವುದನ್ನೇ ವಿಶಿಷ್ಟವಾಗಿ ಮಾಡುತ್ತಾರೆ ಅಷ್ಟೇ’. ಚೇತನ್ ಭಗತ್ ಬಹುಶಃ ಅಂತಹ ಪಟ್ಟಿಗೆ ಸೇರಿದವರು.