Chandrakanth Pokale

Chandrakanth Pokale

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಚಂದ್ರಕಾಂತ ಅವರು ಕನ್ನಡ, ಮರಾಠಿ ಎರಡು ಭಾಷೆಗಳಲ್ಲೂ ಪ್ರಭುತ್ವ ಪಡೆದಿದ್ದು, ಮರಾಠಿ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಕನ್ನಡಿಗರಿಗೆ ಪರಚಯಿಸುತ್ತಿದ್ದಾರೆ. ಅಲ್ಲದೇ ಕನ್ನಡ-ಮರಾಠಿ ಭಾಷಾ ಸೇತುವೆಯಾಗಿ ಕೆಲಸಮಾಡುತ್ತಿದ್ದಾರೆ. ಅನುವಾದಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಅನುವಾದ ಯಜ್ಞದಲ್ಲಿ ತಮ್ಮ ಹವಿಸ್ಸನ್ನೂ ಧಾರೆಎರೆದು ಮರಾಠಿ ಸಾಹಿತ್ಯದಿಂದ ಬಹುಮೌಲಿಕ ಕೃತಿಗಳನ್ನು ಕನ್ನಡಕ್ಕೆ ನೀಡುತ್ತಾ ಬಂದಿರುವ ಲೇಖಕರಲ್ಲಿ ಅತ್ಯಂತ ಪ್ರಮುಖರು.
ಬೆಳಗಾವಿಯ ಗಡಿಭಾಗದಲ್ಲಿ ನೆಲೆಸಿರುವ ಚಂದ್ರಕಾಂತ ಪೊಕಳೆ ಆಗಾಗ್ಗೆ ಮರುಕಳಿಸುವ ಭಾಷಾ ವಾದ-ವಿವಾದ, ಏಕೀಕರಣ ಹೋರಾಟ, ಕನ್ನಡದ ಅಸ್ತಿತ್ವದ ಪ್ರಶ್ನೆ, ರಾಜಕಾರಣಿಗಳ ಮಸಲತ್ತುಗಳು ಇವುಗಳ ಮಧ್ಯೆಯೂ ಭಾಷಾ ಸ್ನೇಹಕ್ಕಾಗಿ ನಿರಂತರವಾಗಿ ದುಡಿಯುತ್ತಿದ್ದಾರಿ. ಭಾಷಾ ಬೆಳವಣಿಗೆಗೆ ತಮ್ಮದೇ ಆದ ಹಾದಿ ಕಂಡುಕೊಂಡಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮೇಲಿನ ಪ್ರಭುತ್ವ, ವಿದ್ವತ್‌, ಅಧ್ಯಯನಶೀಲತೆಯಿಂದ ಸಾಹಿತ್ಯದ ಯಾವುದೇ ಪ್ರಕಾರವನ್ನು ಆಯ್ಕೆಮಾಡಿ ಅನುವಾದಿಸಿದರೂ ಅದು ಸಹಜವಾಗಿ ಅನುವಾದಿತ ಭಾಷೆಗೆ ಹೊಂದಿಕೊಂಡು ಸ್ವಾಭಾವಿಕವೆನಿಸುವಂತಹ ಶೈಲಿ ಇವರ ಬರವಣಿಗೆಯದ್ದು. ಇವರ ಮನೆಮಾತು ಕೊಂಕಣಿ, ಕಲಿತದ್ದು ಕನ್ನಡ, ತಾಯಿ ಹಾಗೂ ಹೆಂಡತಿ ಮರಾಠಿ ಪರಿಸರದಿಂದ ಬಂದವರು. ಇದರಿಂದ ಕೊಂಕಣಿ-ಕನ್ನಡ-ಮರಾಠಿ ಭಾಷೆಗಳ ಸಹಜ-ಒಡನಾಟದಿಂದ ಅನುವಾದ ಕ್ರಿಯೆಗೆ ದೊರೆತ ಭಾಷಾ ಬಂಧುರ. ಭಾಷಾಂತರದ ಹಿಂದೆ ಯಾವುದೇ ಸೈದ್ಧಾಂತಿಕ ನೆಲೆಗಟ್ಟಿರದಿದ್ದರೂ ತಮ್ಮದೇ ಹಾದಿಯಲ್ಲಿ, ಮೂಲದಲ್ಲಿ ಓದಿದಷ್ಟೇ ತೃಪ್ತಿಕೊಡುವಂತಹ ಬರವಣಿಗೆಯಿಂದ ಸುಮಾರು 60 ಕ್ಕೂ ಹೆಚ್ಚು ಕೃತಿಗಳನ್ನು, ಇನ್ನೂರಕ್ಕೂ ಹೆಚ್ಚು ಕಥೆಗಳನ್ನು, 50 ಕ್ಕೂ ಹೆಚ್ಚು ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇವರು ಮೊದಲು ಅನುವಾದಿಸಿದ ಕೃತಿ ಜಯವಂತ ದಳವಿಯವರ ‘ಚಕ್ರ’ ಕಾದಂಬರಿ. ಈ ಕಾದಂಬರಿಯನ್ನು ಕಸ್ತೂರಿ ಮಾಸ ಪತ್ರಿಕೆಯ ಪುಸ್ತಕ ವಿಭಾಗಕ್ಕಾಗಿ ಸಂಕ್ಷಿಪ್ತವಾಗಿ ಸಂಗ್ರಹಿಸಿದರು. ಈ ಅನುವಾದವನ್ನೂ ಓದಿದ ಐಬಿಎಚ್‌. ಪ್ರಕಾಶನ ಸಂಸ್ಥೆಯು ಪೂರ್ಣ ಪ್ರಮಾಣದಲ್ಲಿ ಅನುವಾದಿಸಿಕೊಡುವಂತೆ ಕೋರಿದಾಗ, ಅನುವಾದದ ಪೂರ್ಣ ಕೃತಿಯು ಪುಸ್ತಕ ರೂಪದಲ್ಲಿ ಪ್ರಕಟಗೊಂಡಾಗ ಕಾದಂಬರಿ ವಲಯದಲ್ಲಿ ಉತ್ತಮ ಪ್ರಾರಂಭ ದೊರೆತು ಅನೇಕ ಕಾದಂಬರಿಗಳನ್ನು ಅನುವಾದಿಸಿದರು.

Books By Chandrakanth Pokale