Ashwath S L

Ashwath S L

ಅರಿವಿನ ದಾರಿಗೆ ಹೊರಳುವ ಮುನ್ನ…
ಕಾರ್ಕಳದ ಪ್ರಸಿದ್ಧ ಕ್ರಿಯೇಟಿವ್ ಕಾಲೇಜಿನ ಸ್ಥಾಪಕರಲ್ಲಿ ಓರ್ವರಾದ ಮತ್ತು ಗಣಿತ ಪ್ರಾಧ್ಯಾಪಕರಾದ ಅಶ್ವತ್ ಎಸ್. ಎಲ್ ಅವರ ಚೊಚ್ಚಲ ಪುಸ್ತಕ ‘ಅರಿವಿನ ದಾರಿ’ ಪ್ರಬುದ್ಧ ಲೇಖನಗಳ ಕೃತಿ. ಇದನ್ನು ಒಂದು ಪುಸ್ತಕ ಎಂದು ಹೇಳುವುದಕ್ಕಿಂತ ಹದಿಹರೆಯದ ಮನಸುಗಳಿಗೆ ಒಂದು ಕೈದೀವಿಗೆ ಎಂದು ಕರೆಯಬಹುದು.
‘ಪುಸ್ತಕ ಮನೆ’ – ವಿನೂತನ ಪ್ರಯೋಗದ ಮೂಲಕ ಸಹೃದಯ ಓದುಗರ ಅಭಿರುಚಿಯನ್ನು ಹೆಚ್ಚಿಸಿ ಓದು ನಿರಂತರವಾಗಲು ಕಾರಣಕರ್ತರಾದ ಕ್ರಿಯೇಟಿವ್ ಸಪ್ತ ಮನಸುಗಳಲ್ಲಿ ಅಶ್ವತ್ ಅವರ ಕನಸಿನ ಕೂಸು ಈ ‘ಪುಸ್ತಕ ಮನೆ’. ಅವರು ಮಲೆನಾಡಿನ ಒಂದು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದವರು. ಹಳ್ಳಿಯ ಹಸಿರು ತೋಟದ ನಡುವೆ ಬೆಳೆದವರು. ಹಾಗೆ ಅವರು ಶ್ರೇಷ್ಠ ಗಣಿತ ಪ್ರಾಧ್ಯಾಪಕರಾದರೂ, ದೀರ್ಘ ಅವಧಿಗೆ ಇಂಗ್ಲೀಷ್ ಭಾಷೆಯಲ್ಲಿ ಪಾಠ ಮಾಡಿದರೂ ಸಾಹಿತ್ಯದ ಪ್ರಜ್ಞೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಪುಸ್ತಕಗಳನ್ನು ಪ್ರೀತಿ ಮಾಡಿಕೊಂಡು ಬಂದಿದ್ದಾರೆ. ಕಾರ್ಕಳದಲ್ಲಿ ರೂಪಿಸಿದ ‘ಪುಸ್ತಕ ಮನೆ’ ಅವರು ನಾಡಿಗೆ ಕೊಟ್ಟ ಒಂದು ಅನನ್ಯ ಕೊಡುಗೆ ಎಂದೇ ಹೇಳಬಹುದು. ನನ್ನೂರು ಕಾರ್ಕಳದಲ್ಲಿ ಪುಸ್ತಕಗಳ ಪ್ರೀತಿಯನ್ನು ಮತ್ತು ಓದುವ ಸಂಸ್ಕೃತಿಯನ್ನು ಬೆಳೆಸುವ ಅವರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಮಹಾನಗರಗಳಲ್ಲಿ ಬಿಡುಗಡೆ ಆಗುವ ಶ್ರೇಷ್ಠ ಪುಸ್ತಕಗಳು ಅವರ ಪ್ರಯತ್ನಗಳಿಂದ ಬಹುಬೇಗ ಓದುಗರ ಮನೆ ಮನಗಳನ್ನು ತಲುಪುತ್ತಿವೆ.
ಅರಿವಿನ ದಾರಿ ಒಂದು ಸುಂದರವಾದ ಕೈಪಿಡಿಯಾಗಿದ್ದು ಈ ಪುಸ್ತಕದಲ್ಲಿ ಅವರ ಒಂದೂವರೆ ದಶಕದ ಬೋಧನಾನುಭವವು ಹೆಪ್ಪುಗಟ್ಟಿದೆ ಎಂದೇ ಹೇಳಬಹುದು. ಇಲ್ಲಿ ಪ್ರೇರಣಾದಾಯಕವಾದ ಹಲವು ಕಥೆಗಳಿವೆ. ಸೋತು ಗೆದ್ದವರ ಕಥೆಗಳು ಹೆಚ್ಚಿವೆ. ನೊಂದವರಿಗೆ ಸಾಂತ್ವನ ನೀಡುವ ಕೊಟೇಶನಗಳು ಇವೆ. ಹದಿಹರೆಯದ ಹೃದಯಗಳಿಗೆ ಮಾರ್ಗದರ್ಶನ ನೀಡುವ ಮಾತುಗಳಿವೆ. ಒಂದು ಪರಿಪೂರ್ಣ ಮಗುವನ್ನು ರೂಪಿಸಲು ಆ ಮಗುವಿನ ಹೆತ್ತವರು, ಶಿಕ್ಷಕರು ಕೈಗೊಳ್ಳಬೇಕಾದ ಕ್ರಮಗಳನ್ನು ಉದಾಹರಣೆಗಳ ಮೂಲಕ ಅವರು ವಿವರಿಸಿದ್ದಾರೆ. ಅವರು ನೀಡಿದ ಅಭಿಪ್ರಾಯಗಳಲ್ಲಿ ಖಚಿತತೆ ಇದೆ. ಸಮಾಜವನ್ನು ತಿದ್ದುವ ತುಡಿತ ಇದೆ. ದಾರಿ ತಪ್ಪಿ ಹೋದ ಎಳೆಯರನ್ನು ತಿದ್ದಿ ತೀಡಿ ಮತ್ತೆ ಸಮಾಜದ ಒಳಗೆ ತರುವ ಆಕಾಂಕ್ಷೆ ಇದೆ. ಅವರು ತಮ್ಮ ‘ಅರಿವಿನ ದಾರಿ’ ಪುಸ್ತಕದಲ್ಲಿ ಬಳಸಿಕೊಂಡ ಕೌನ್ಸೆಲಿಂಗ್ ಕಥೆಗಳು ಬೇಗನೆ ಕನೆಕ್ಟ್ ಆಗುತ್ತವೆ. ಹೆತ್ತವರಲ್ಲಿ ಎಚ್ಚರವನ್ನು ಮೂಡಿಸುತ್ತವೆ. ಅದರಲ್ಲೂ ನನ್ನ ಆಸಕ್ತಿಯ ಕ್ಷೇತ್ರವಾದ ಹದಿಹರೆಯದ ಮನೋವಿಕಾಸದ ಹೆಜ್ಜೆಗುರುತುಗಳು ಇಲ್ಲಿ ನನಗೆ ಆಪ್ತವಾದವು.
ಪರೀಕ್ಷಾ ಸಮಯದ ಬಗ್ಗೆ ಬರೆದ ಲೇಖನವು ಎಲ್ಲ ಹಂತಗಳ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಮಾರ್ಗದರ್ಶನವನ್ನು ಸವಿವರವಾಗಿ ತಿಳಿಯಪಡಿಸುವಂತಿದೆ. ಒಂದೂವರೆ ದಶಕಗಳ ಕಾಲ ಅವರು ತನ್ನ ವಿದ್ಯಾರ್ಥಿಗಳ ಜೊತೆಗೆ ಕಳೆದ ಅನುಭವಗಳ ರಸಪಾಕವೇ ಇಲ್ಲಿನ ಲೇಖನಗಳು. ಇಲ್ಲಿ ಅವರು ಸಣ್ಣ ಸಣ್ಣ ಅಂಶಗಳನ್ನು ಕೂಡ ಅಡಕ ಮಾಡಿ ಗೆದ್ದಿದ್ದಾರೆ.
‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಲೇಖನವು ಇಂದಿನ ಹದಿಹರೆಯದ ಮನಸುಗಳಿಗೆ ಅನಿವಾರ್ಯ ಮತ್ತು ವಿದ್ಯಾರ್ಥಿಗಳಿಗೆ ಓದುವ ಸುಖವನ್ನು ಪರಿಚಯ ಮಾಡುತ್ತದೆ. ಇಲ್ಲಿ ಲೇಖಕರು ಹಲವು ಒಳ್ಳೆಯ ಪುಸ್ತಕಗಳ ಪಟ್ಟಿ ನೀಡಿದ್ದಾರೆ. ತಾನು ಪುಸ್ತಕಗಳಿಂದ ಹೇಗೆ ಪ್ರಭಾವಿತನಾದೆ ಎಂದು ವಿವರಿಸಿದ್ದಾರೆ. ಈ ಮೊಬೈಲ್ ಕಾಲದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗ್ತಾ ಇದೆ ಎನ್ನುವ ಆತಂಕವೂ ಇಲ್ಲಿದೆ.
ಹಲವು ರಾಜ್ಯ ಮತ್ತು ರಾಷ್ಟçಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿಗಳ ಕಣಜವಾಗಿರುವ ಐಐಟಿ ಕನಸು ಮಾಸುವ ಮುನ್ನ ಮಾರ್ಮಿಕವಾಗಿ ಮೂಡಿಬಂದಿದೆ. ಇಲ್ಲಿ ಆ ರೀತಿಯ ಪರೀಕ್ಷೆಗಳನ್ನು ಗೆದ್ದವರ ಕಥೆಗಳಿವೆ. ಆ ರೀತಿಯ ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ನಡೆಯಬೇಕು ಎಂಬುವುದನ್ನು ಬುಲೆಟ್ ಪಾಯಿಂಟಗಳ ಮೂಲಕ ಸುಲಭವಾಗಿ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಾರೆ. ಇದು ಹದಿಹರೆಯದ ವಿದ್ಯಾರ್ಥಿಗಳು ಓದಲೇ ಬೇಕಾದ ಲೇಖನ. ಇಡೀ ಪುಸ್ತಕದಲ್ಲಿ ಲೇಖಕರು ಬಳಸಿಕೊಂಡ ಕನ್ನಡ ಮತ್ತು ಇಂಗ್ಲೀಷ್ ಕೊಟೇಶನಗಳು ಪುಟ್ಟ ಹಣತೆಗಳಾಗಿ ಅರಿವಿನ ಹಾದಿಯನ್ನು ಬೆಳಗುತ್ತವೆ. ಲೇಖಕರು ಸುದೀರ್ಘ ಅವಧಿಗೆ ಇಂಗ್ಲಿಷ್ ಭಾಷೆಯಲ್ಲಿ ಗಣಿತವನ್ನು ಬೋಧನೆ ಮಾಡಿದ್ದರೂ ಅವರಿಗೆ ಕನ್ನಡ ಭಾಷೆಯ ಮೇಲಿರುವ ಹಿಡಿತ ಮತ್ತು ಪ್ರೀತಿಗಳು ಈ ಪುಸ್ತಕವನ್ನು ಸರ್ವಾಂಗ ಸುಂದರವಾಗಿ ಮಾಡಿವೆ. ಕನ್ನಡದ ಸೌಂದರ್ಯವನ್ನು ಹೆಚ್ಚಿಸಿವೆ. ಇವರು ತನ್ನ ಹೆತ್ತವರಿಂದ, ಗುರುಗಳಿಂದ ಕಲಿತಿರುವ ಮೌಲ್ಯಗಳು ಪುಸ್ತಕದ ಅಲ್ಲಲ್ಲಿ ಹರಳುಗಟ್ಟಿದ ವಜ್ರಗಳಾಗಿ ಕೂತಿವೆ.
‘ಅರಿವಿನ ದಾರಿ’ ಪುಸ್ತಕವನ್ನು ಸಾರಸ್ವತ ಸಮಾಜಕ್ಕೆ ನೀಡುವ ಮೂಲಕ ಅಶ್ವತ್ ಇವರು ಒಂದು ಒಳ್ಳೆಯ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಅವರಿಂದ ಇನ್ನಷ್ಟು ಇದೇ ಆಯಾಮದ ಪುಸ್ತಕಗಳು ಬರಲಿ ಎಂಬುದು ಹಾರೈಕೆ.

ರಾಜೇಂದ್ರ ಭಟ್ ಕೆ.
(ರಾಷ್ಟçಮಟ್ಟದ ವಿಕಸನ ತರಬೇತುದಾರರು)

Books By Ashwath S L