ಮಣಿಕಾಂತ್ ಕನ್ನಡದ ಪತ್ರಕರ್ತರು ಹಾಗೂ ಬರಹಗಾರರು. ಹಾಯ್ ಬೆಂಗಳೂರ್, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ, ಉಪಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಅವರ ಪುಸ್ತಕಗಳು ಬಹಳ ಜನಪ್ರಿಯವಾಗಿದ್ದು ದಾಖಲೆ ಸಂಖ್ಯೆಯಲ್ಲಿ ಮಾರಾಟ ಹಾಗು ಮರುಮುದ್ರಣ ಕಂಡಿವೆ.
ಮಣಿಕಾಂತ್ ಮೂಲತಃ ಮಂಡ್ಯದವರು. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯತನಹಳ್ಳಿ ಎಂಬ ಊರಿನವರು. ಮಂಡ್ಯದ ಪಿ.ಇ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಟೊಮೊಬೈಲ್ ಎಂಜಿನಿಯರಿಂಗ್ ಪದವೀಧರರು. ಅವರು ಪತ್ರಿಕೆಗಳಲ್ಲಿ ತಮ್ಮ ಅಂಕಣಗಳ ಮೂಲಕ ಓದುಗರ ವಲಯದಲ್ಲಿ ಪರಿಚಿತರಾದವರು. ಎಂಟು ವರ್ಷಗಳ ಕಾಲ ‘ವಿಜಯ ಕರ್ನಾಟಕ’ದಲ್ಲಿ ಕೆಲಸ ನಿರ್ವಹಿಸಿ ‘ಈ ಗುಲಾಬಿಯು ನಿನಗಾಗಿ’, ‘ಮರೆಯಲಿ ಹ್ಯಾಂಗ’, ‘ಉಭಯ ಕುಶಲೋಪರಿ ಸಾಂಪ್ರತ’ ಹಾಗೂ ‘ಹಾಡು ಹುಟ್ಟಿದ ಸಮಯ’ ಎಂಬ ಜನಪ್ರಿಯ ಅಂಕಣಗಳನ್ನು ಬರೆದಿದ್ದಾರೆ.[೧] ಹೆಚ್ಚು ಮಾರಾಟ ದಾಖಲೆಗಳನ್ನು ಕಂಡ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ‘ನೀಲಿಮಾ ಪ್ರಕಾಶನ’ ಎಂಬುದು ಅವರ ಪುಸ್ತಕ ಪ್ರಕಾಶನ ಸಂಸ್ಥೆ.