Shantinatha Desai

Shantinatha Desai

ನವ್ಯಕಾದಂಬರಿಕಾರರು, ವಿಮರ್ಶಕರು, ಕಥೆಗಾರರೆಂದೇ ಪ್ರಸಿದ್ಧರಾಗಿದ್ದ ಶಾಂತಿನಾಥ ದೇಸಾಯಿಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ. ಪ್ರಾಥಮಿಕ ಮತ್ತು ಮೆಟ್ರಿಕ್ ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಮುಗಿಸಿದರು. ಮುಂದೆ ಮುಂಬಯಿಯ ವಿಲ್ಸನ್ ಕಾಲೇಜಿನಿಂದ ಬಿ.ಎ. ಹಾಗೂ ಎಂ.ಎ. ಪದವಿ ಪಡೆದರು. ಆನಂತರ ಬ್ರಿಟಿಷ್ ಸ್ಕಾಲರ್‌ಷಿಪ್ ಪಡೆದು ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು.ಅಲ್ಲಿಂದ  ಹಿಂದಿರುಗಿ ಬಂದನಂತರ ಕರ್ನಾಟಕ ವಿಶ್ವವಿದ್ಯಾಲಯ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಂತರ 1988ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ  ಸೇವೆಸಲ್ಲಿಸಿದರು. ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಮತ್ತು ಜ್ಞಾನಪೀಠ ಪ್ರಶಸ್ತಿ ಸಲಹಾ ಸಮಿತಿಯ ಸಲಹೆಗಾರರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ಇಂಗ್ಲೆಂಡಿಗೆ ಹಡಗಿನಲ್ಲಿ ಪ್ರಯಾಣ ಬೆಳೆಸಿದಾಗ ಬರೆದ ಕಥೆ ಕ್ಷಿತಿಜ,ಇದು ಶಾಂತಿನಾಥ ದೇಸಾಯಿ ಅವರಿಗೆ ಜನಪ್ರಿಯತೆ ತಂದುಕೊಟ್ಟ ಕಥೆ. ಐವತ್ತಕ್ಕೂ ಹೆಚ್ಚು ಕಥೆ ಪ್ರಕಟವಾಗಿದ್ದು, ಮಂಜುಗಡ್ಡೆ, ಕ್ಷಿತಿಜ, ರಾಕ್ಷಸ, ಪರಿವರ್ತನೆ, ಕೂರ್ಮಾವತಾರ, ಕೆಲವು ಆಯ್ದ ಕಥೆಗಳು ಕಥಾಸಂಕಲನಗಳು.

ಲಘುವಾದದ್ದೆಂದು ಎಣಿಸುವ ವ್ಯಕ್ತಿಯ ಮನಸ್ಸಿನ ಅಂತರಾಳದ ಹಲವು ಪ್ರಕ್ರಿಯೆಗಳನ್ನು ದಾಖಲಿಸುವಲ್ಲಿನ ವಿಶೇಷತೆಯ ಇವರ ಸಣ್ಣ ಕಥೆಗಳಲ್ಲಿನ ಕೇಂದ್ರೀಯ ವಸ್ತುಗಳು. ಕಾದಂಬರಿಗಳು-ಮುಕ್ತಿ, ವಿಕ್ಷೇಪ, ಸೃಷ್ಟಿ, ಬೀಜ, ಸಂಬಂಧ, ಅಂತರಾಳ, ಓಂಣಮೋ ಪ್ರಸಿದ್ಧ ಕಾದಂಬರಿಗಳು. ಏಕತಾನತೆ ಹೊಂದಿದ್ದ ಕಾಲದಲ್ಲಿ ಮೂಲಭೂತ ಅರ್ಥ-ಉದ್ದೇಶಗಳನ್ನು ಪರಿಶೋಸುವ ಕಾದಂಬರಿಗಳನ್ನು ಬರೆದ ಕೀರ್ತಿ. ಮುಕ್ತಿ ಭಾರತೀಯ ಎಲ್ಲ ಭಾಷೆಗೂ ಅನುವಾದಗೊಂಡ ಕೃತಿ. ಅವರ ವಿಮರ್ಶಾ ಕೃತಿಗಳು-ಸಾಹಿತ್ಯ ಮತ್ತು ಭಾಷೆ, ನವ್ಯ ಸಾಹಿತ್ಯ ದರ್ಶನ, ಗಂಗಾಧರ ಚಿತ್ತಾಲರ ಕಾವ್ಯ ಸೃಷ್ಟಿ, ಕನ್ನಡ ಕಾದಂಬರಿ ನಡೆದು ಬಂದ ರೀತಿ, ಎಂ.ಎನ್.ರಾಯ್. ಕನ್ನಡ ಕೃತಿಗಳಲ್ಲದೆ ಇಂಗ್ಲಿಷ್‌ನಲ್ಲೂ ಕೃತಿ ರಚನೆ. ಕೊಲೊನಿಯಲ್ ಕಾನ್ಷಿಯಸ್‌ನೆಸ್ ಇನ್ ಕಾಮನ್ ವೆಲ್ತ್ ಲಿಟರೇಚರ್, ಕ್ರಿಟಿಕಲ್ ಎಸ್ಸೇಸ್ ಆನ್ ಇಂಡಿಯನ್ ರೈಟಿಂಗ್ಸ್ ಇನ್ ಇಂಗ್ಲಿಷ್, ಎಕ್ಸ್‌ಪಿರಿಮೆಂಟೇಷನ್ ವಿತ್ ಲ್ಯಾಂಗ್ವೇಜ್ ಇನ್ ಇಂಡಿಯನ್ ರೈಟಿಂಗ್ ಇನ್ ಇಂಗ್ಲಿಷ್, ದ ಇಮೇಜ್ ಆಫ್ ಇಂಡಿಯ ಇನ್ ವೆಸ್ಟ್ರನ್ ಕ್ರಿಯೇಟಿವ್ ರೈಟಿಂಗ್, ಇಂಡಿಯನ್ ಪೊಯಿಟ್ರಿ ಟುಡೆ ಅಲ್ಲದೆ ಪಿ. ಲಂಕೇಶರ ಕ್ರಾಂತಿ ಬಂತು ಕ್ರಾಂತಿ. ನಾಟಕ-ಹಿಯರ್ ಕಮ್ಸ್ ರೆವಲ್ಯೂಷನ್, ಅನಂತಮೂರ್ತಿಯವರ ಅವಸ್ಥೆ ಕಾದಂಬರಿ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸಂದ ಪ್ರಶಸ್ತಿ ಗೌರವಗಳಲ್ಲಿ ಮುಖ್ಯವಾದುವು-ನವ್ಯ ಸಾಹಿತ್ಯ ದರ್ಶನ ಕೃತಿಗೆ ವರ್ಧಮಾನ ಪ್ರಶಸ್ತಿ, ರಾಕ್ಷಸ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಓಂಣಮೋ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಲಭಿಸಿವೆ.

Books By Shantinatha Desai