S Shadakshari

S Shadakshari

ಪ್ರೊ. ಷಡಕ್ಷರಪ್ಪ ಶೆಟ್ಟರ್ ಅವರು ಜನಿಸಿದ್ದು ೧೧, ಡಿಸೆಂಬರ್ ೧೯೩೫ ರಂದು ಬಳ್ಳಾರಿ ಜಿಲ್ಲೆ ಹಡಗಲಿ ತಾಲ್ಲೂಕಿನ ಹಂಪಸಾಗರದಲ್ಲಿ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ನಲ್ಲಿ ಉನ್ನತ ವ್ಯಾಸಂಗ ಪಡೆದ ಇವರು ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯ ಕುರಿತು ಸುಮಾರು ೩೦ಕ್ಕೂ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಲ್ಲಿ ಇವರ ಸಂಶೋಧನೆಗಳ ಕೊಡುಗೆ ಬಹಳ ಇತ್ತು. . ಕೇಂಬ್ರಿಜ್, ಹಾರ್ವರ್ಡ್, ಹೈಡಲ್ ಬರ್ಗ್, ಅಥೆನ್ಸ್, ಲೈಡನ್, ಮಾಸ್ಕೋ ವಿಶ್ವವಿದ್ಯಾನಿಲಯಗಳಲ್ಲಿ ಕೆಲಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು ಹಲವಾರು ರಾಜ್ಯ ಹಾಗು ರಾಷ್ಟ್ರ ಪ್ರಶಸ್ತಿಗಳು ಇವರಿಗೆ ಸಂದಿದ್ದವು. ಇವರು ಭಾರತೀಯಇತಿಹಾಸ ಅನುಸಂಧಾನ ಪರಿಷತ್, ದಕ್ಷಿಣ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ಹಾಗು ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್ಗಳ ಸರ್ವಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದರು. ಅಲ್ಲದೇ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ವಿಶ್ವಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನದ ಗೌರವವನ್ನೂ ಇವರು ಪಡೆದಿದ್ದರು. ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದರು.೨೮ ಫೆಬ್ರವರಿ ೨೦೨೦ರಂದು ಬೆಂಗಳೂರಿನಲ್ಲಿ ನಿಧನರಾದರು.
ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ, ಹಂಪಸಾಗರದ ಸರೂರ ಎನ್ನುವ ದೊಡ್ಡಮನೆತನದಲ್ಲಿ ೧೧, ಡಿಸೆಂಬರ್,೧೯೩೫ ರಲ್ಲಿ ಜನಿಸಿದರು. ತಂದೆ ಅಂದಾನಪ್ಪ ಶೆಟ್ಟರು. ತಾಯಿ ತೋಟಮ್ಮನವರು. ತಾಯಿ ಬಹಳ ಸಂಪ್ರದಾಯಸ್ಥರು. ತಾತ ವೀರಭದ್ರಪ್ಪನವರು ಒಳ್ಳೆಯ ಶ್ರೀಮಂತರಾಗಿದ್ದರು. ಸಮಾಜದಲ್ಲಿ ಅನ್ಯಾಯದ ವಿರುದ್ಧ ಹೋರಾಟನಡೆಸಿದವರು. ಪಾಳೇಗಾರರ ಹಿನ್ನೆಲೆ; ಅವರು ‘ಮುಂದರಿಸಿ ಭೀಮರಾಯರ’ ಸಮಕಾಲೀನರು. ಅಜ್ಜಿ ಹುಬ್ಬಳ್ಳಿಯ ವ್ಯಾಪಾರಸ್ಥ ಮನೆತನದ ಹೆಣ್ಣುಮಗಳು. ಶೆಟ್ಟರ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾಭ್ಯಾಸ ಹಂಪಸಾಗರ ಹಾಗೂ ಹೊಸಪೇಟೆಯಲ್ಲಿ ಜರುಗಿತು. ಕಾಲೇಜ್ ವಿದ್ಯಾಭ್ಯಾಸ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕುವೆಂಪು ಆಗ ಪ್ರಾಂಶುಪಾಲರಾಗಿದ್ದರು ಹೆಸರಾಂತ ಸಿ.ಡಿ ನರಸಿಂಹಯ್ಯ, ಆ.ರಾ.ಮಿತ್ರ, ಹಂಪ ನಾಗರಾಜಯ್ಯ, ಕಮಲಾ ಹಂಪನಾ, ರಾಜೀವ್ ತಾರಾನಾಥ್, ಕಡಿದಾಳ್ ಶಾಮಣ್ಣ, ಜಿ. ರಾಮಕೃಷ್ಣ ಮುಂತಾದವರ ಒಡನಾಟವಿತ್ತು. ಆನರ್ಸ್ ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ೪ ಚಿನ್ನದ ಪದಕಗಳ ವಿಜೇತರೆಂದು ಹೆಗ್ಗಳಿಕೆ ಗಳಿಸಿದ್ದರು. ಮುಂದೆ ಮಹಾರಾಣಿ ಅಮ್ಮಣ್ಣಿಯವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ೧೯೬೧ ರಲ್ಲಿ ಧಾರವಾಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಿ.ಸಿ.ಪಾವಟೆಯವರ ಕರೆಯ ಮೇರೆಗೆ ಇತಿಹಾಸ ವಿಭಾಗಕ್ಕೆ ಹೋಗಿ ಸೇರಿಕೊಂಡರು.

Books By S Shadakshari