ಪ್ರೀತಿ ನಾಗರಾಜ್ ಕನ್ನಡ ಮತ್ತು ಇಂಗ್ಲೀಷಿನಲ್ಲಿ ಬರೆಯುವ ಲೇಖಕಿ, ಪತ್ರಕರ್ತೆ ಮತ್ತು ಅಂಕಣ ಬರಹಗಾರ್ತಿ. ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆಗಳುಳ್ಳ ಅವರ ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಪ್ರಜಾವಾಣಿ ‘ ಪತ್ರಿಕೆಯಲ್ಲಿ ಪ್ರಸಾರವಾದ ಅವರ ‛ಮಿರ್ಚಿ ಮಂಡಕ್ಕಿ’ ಅಂಕಣ ಬರಹಗಳು ಅಪಾರ ಮೆಚ್ಚುಗೆಗೆ ಪಾತ್ರವಾಗಿ, ಪುಸ್ತಕವಾಗಿಯೂ ಪ್ರಕಟಗೊಂಡಿವೆ. ಬಾಲ್ಯದಿಂದಲೂ ರಂಗಭೂಮಿಯ ವಾತಾವರಣದಲ್ಲಿಯೇ ಬೆಳೆದ ಪ್ರೀತಿ, ರಂಗಚಟುವಟಿಕೆಗಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಪತ್ರಕರ್ತೆಯಾಗಿ ತಮ್ಮ ವೃತ್ತಿ ಆರಂಭಿಸಿದ ಪ್ರೀತಿಯವರು ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್’ಪ್ರೆಸ್, CNBC ಮುಂತಾದ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.
ಪಿ.ಶೇಷಾದ್ರಿ ನಿರ್ದೇಶನದ, ರಾಷ್ಟ್ರ ಪ್ರಶಸ್ತಿ ಪಡೆದ ಡಿಸೆಂಬರ್ 1 ಚಿತ್ರಕ್ಕೆ ಚಿತ್ರಕತೆ ಸಹಾಯಕರಾಗಿ ಕೆಲಸ ಮಾಡಿದ ಪ್ರೀತಿ, ಅದೇ ಚಿತ್ರದಲ್ಲಿ ನಟಿಸಿದ್ದಾರೆ. ರಂಗಕರ್ಮಿ, ನಟಿ ಬಿ.ಜಯಶ್ರೀ ಅವರ ಆತ್ಮಕಥೆ “ಕಣ್ಣಾಮುಚ್ಚೆ ಕಾಡೇಗೂಡೇ” ಕೃತಿಯ ನಿರೂಪಣೆ ಮಾಡಿರುವ ಪ್ರೀತಿ, ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರಲ್ಲಿ ಪ್ರಮುಖರು.