ಡಾ. ಕೆ.ಎನ್. ಗಣೇಶಯ್ಯ ಅವರು ಪ್ರಖ್ಯಾತ ಕೃಷಿ ವಿಜ್ಞಾನಿ ಮತ್ತು ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರು. ಮೂಲತಃ ಕೋಲಾರ ಜಿಲ್ಲೆಯವರಾದ ಅವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ಪ್ರಧಾನ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಇತಿಹಾಸ ಮತ್ತು ವೈಜ್ಞಾನಿಕ ವಿಷಯಗಳನ್ನು ಒಳಗೊಂಡ ರೋಚಕ ಕಥೆಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೊಸ ಶೈಲಿಯನ್ನು ಪರಿಚಯಿಸಿ ಹೆಸರಾಗಿದ್ದಾರೆ.
ಪರಿಸರ ಮತ್ತು ಜೀವವೈವಿಧ್ಯತೆಯ ಅಧ್ಯಯನ ಹಾಗೂ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಅವರು, 200ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮತ್ತು ಹಲವಾರು ವಿಜ್ಞಾನ ಸಂಬಂಧಿತ ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇತಿಹಾಸದ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ಅವರು, ಜಗತ್ತಿನ ವಿಜ್ಞಾನಿಗಳಲ್ಲಿ ಚಿರಪರಿಚಿತರಾಗಿದ್ದಾರೆ. ತಮ್ಮ ಸಂಶೋಧನೆಗಳಿಂದ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಜೀವವೈವಿಧ್ಯ ಸಂರಕ್ಷಣಾ ಸಂಶೋಧನೆ ಹಾಗೂ ಭಾರತದ ಜೀವಸಂಪತ್ತಿನ ಗಣಕೀಕರಣ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸಿರುವ ಅವರು, ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಸ್ಯ ಹಾಗೂ ಕೀಟ ಸಂಪತ್ತಿನ ನಕ್ಷೆ ತಯಾರಿಸುತ್ತಿದ್ದಾರೆ. ಭಾರತದ ಹಲವು ವಿಜ್ಞಾನ ಸಂಸ್ಥೆಗಳಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಸರ್ಕಾರದ ಸಹಯೋಗದೊಂದಿಗೆ “ಜೀವಸಂಪದ” ಹೆಸರಿನಲ್ಲಿ ಭಾರತೀಯ ಸಸ್ಯ, ಪ್ರಾಣಿ, ಅಣುಜೀವಿಗಳು ಹಾಗೂ ಸಮುದ್ರದ ಜೀವಸಂಪತ್ತಿನ ಕುರಿತು ಸಿ.ಡಿ.ಗಳನ್ನು ರೂಪಿಸಿ ಬಿಡುಗಡೆ ಮಾಡಿರುವ ಅವರು, ಈ ಜಾಲತಾಣ ಮತ್ತು ಸಿ.ಡಿ.ಗಳು ಜಾಗತಿಕ ವಿಜ್ಞಾನಿಗಳ ಗಮನ ಸೆಳೆದಿವೆ.
ಗಣೇಶಯ್ಯ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಕನ್ನಡದಲ್ಲಿ ಕಾದಂಬರಿ ಮತ್ತು ಕಥೆಗಳ ಮೂಲಕ ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. “ಶಾಲಭಂಜಿಕೆ”, ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಅವರ ಮೊದಲ ಚಾರಿತ್ರಿಕ ನೀಳ್ಗತೆ, ಅವರ ಸಾಹಿತ್ಯ ಪಯಣದ ಆರಂಭ. ಅವರ ಬರವಣಿಗೆಯ ವೈಶಿಷ್ಟ್ಯವೆಂದರೆ, ಇತಿಹಾಸ, ವಿಜ್ಞಾನ, ಜೀವವೈವಿಧ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ವಾಸ್ತವ ಘಟನೆಗಳಿಗೆ ಕಲ್ಪನೆ ಮತ್ತು ಕುತೂಹಲವನ್ನು ಬೆರೆಸಿ ಸರಳ ಭಾಷಾಶೈಲಿಯಲ್ಲಿ ನಿರೂಪಿಸುವ ಶೈಲಿ. ಇದುವರೆಗೆ ಅವರು ಹಲವಾರು ಕಾದಂಬರಿ ಮತ್ತು ಕಥಾ ಸಂಕಲನಗಳನ್ನು ರಚಿಸಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಅವರ ಸಣ್ಣಕಥೆಗಳು ಪ್ರಕಟವಾಗಿವೆ. “ಕನಕ ಮುಸುಕು” ಅವರ ಚೊಚ್ಚಲ ಕಾದಂಬರಿಯಾಗಿದ್ದು, ಅವರ ಸಾಹಿತ್ಯಕಾರ್ಯದ ಪ್ರಮುಖ ಕೊಂಡಿಯಾಗಿದ್ದು, ಸಾಹಿತ್ಯ ಪ್ರೇಮಿಗಳಿಗೆ ಮೆಚ್ಚುಗೆಗೆ ಪಾತ್ರವಾಗಿದೆ.