ಜಯಪ್ರಕಾಶ್ ನಾಗತಿಹಳ್ಳಿ, ಮೂಲತಃ ಸಕ್ಕರೆ ನಾಡು ಮಂಡ್ಯದವರು, ಕನ್ನಡದ ಬಗ್ಗೆ ಅಪಾರ ಪ್ರೀತಿಯುಳ್ಳ ಲೇಖಕ, ವಕ್ತಾರ ಮತ್ತು ಮಾಧ್ಯಮತಜ್ಞ. ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ, ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ, ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ.
ಅವರು ಬೆಂಗಳೂರು ದೂರದರ್ಶನದಲ್ಲಿ ಮಾರ್ಗವಾಚಕರಾಗಿ ಹಾಗೂ ಚಂದನ ವಾಹಿನಿಯ ಸಂದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು ದಕ್ಷಿಣ ಜೇಸೀಸ್ನ ಅಧ್ಯಕ್ಷರಾಗಿಯೂ, ಭಾರತೀಯ ಜೇಸೀಸ್ನ ವಲಯ-14ರ ಸಂಯೋಜನಾಧಿಕಾರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ.
ಕನ್ನಡದಲ್ಲಿ ಪ್ರಪ್ರಥಮ ವ್ಯಕ್ತಿತ್ವ ವಿಕಸನ ಧ್ವನಿಸುರುಳಿ “ನಡೆ-ನುಡಿ – ವ್ಯಕ್ತಿತ್ವ ವಿಕಸನದ ಅಲೆಗಳು” ಪ್ರಕಟಿಸಿರುವುದು ಅವರ ಹೆಗ್ಗಳಿಕೆ. ಇದಲ್ಲದೆ, “ವೇಳೆಯ ವೈಯಾರ”, “ಜೀವನದ ಇಂಥ ಆತ್ಮವಿಶ್ವಾಸ” ಎಂಬ ಧ್ವನಿಸುರುಳಿಗಳನ್ನು ಪ್ರಕಟಿಸಿದ್ದಾರೆ.
ವ್ಯಕ್ತಿತ್ವ ವಿಕಸನ ಕುರಿತಂತೆ “ನುಡಿಗನ್ನಡಿ”, “ಸೋಲುಗಳಿಗೆ ಅಂಜದಿರಿ”, “ಕೀಳರಿಮೆ ಏನು? ಏಕೆ? ಹೇಗೆ?”, “ಅನುಕ್ಷಣ ಅನುಭವಿಸಿ” ಮುಂತಾದ ಕೃತಿಗಳನ್ನು ರಚಿಸಿದ್ದಾರೆ.