Be Go Ramesh

Be Go Ramesh

ಒಬ್ಬ ಬರಹಗಾರರು ಎಷ್ಟು ಪುಸ್ತಕ ಬರೆಯಬಹುದು. ಹತ್ತು, ಇಪ್ಪತ್ತು, ತುಂಬಾ ಹೆಚ್ಚೆಂದರೆ ನೂರು. ಆದರೆ ಕನ್ನಡದ ಪ್ರಸಿದ್ಧ ಬರಹಗಾರರಾದ ಬೆ. ಗೋ. ರಮೇಶ್ ಆಗಸ್ಟ್ ೨೨ ೧೯೪೫) ಈ ಎಲ್ಲ ಪರಿಧಿಗಳನ್ನೂ ಮೀರಿದವರು. ಅವರು ಬರೆದು ಪ್ರಕಟಪಡಿಸಿರುವ ಪ್ರಖ್ಯಾತ ಪುಸ್ತಕಗಳ ಸಂಖ್ಯೆ 600ರ ಸಮೀಪದ್ದು. ಯಂತ್ರದಿಂದ ತಂತ್ರಜ್ಞಾನದವರೆಗೆ, ಕೂದಲಿನಿಂದ ಕೋವಿಯವರೆಗೆ, ಸಾಮಾಜಿಕ, ವೈದ್ಯಕೀಯ, ನಿಘಂಟು ಹೀಗೆ ಅವರು ಬರೆಯದಿರುವ ವಿಷಯಗಳೇ ಇಲ್ಲ. ವೃತ್ತಿಯಿಂದ ಇಂಜಿನಿಯರ್ ಆಗಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿದ ಬೆ. ಗೋ ರಮೇಶ್, ಪ್ರವೃತ್ತಿಯಿಂದ ಸಾಹಿತಿಗಳೂ, ಗಮಕಿಗಳೂ ಆಗಿದ್ದಾರೆ. ಅವರು ಪ್ರಕೃತಿ ಚಿಕಿತ್ಸೆಯಲ್ಲೂ ಪರಿಣಿತರು.
ಆಡು ಮುಟ್ಟದ ಸೊಪ್ಪಿಲ್ಲವೆನ್ನುವಂತೆ ರಮೇಶರು ಬರೆಯದ ವಿಷಯಗಳೇ ಇಲ್ಲ. ಆಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಪ್ರಿಯವೆನಿಸುವ ಕೃತಿಗಳ ರಚನೆಯಲ್ಲಿ ಅವರದ್ದು ಸಿದ್ಧಹಸ್ತ. ರಮೇಶರ ಮಕ್ಕಳ ಸಾಹಿತ್ಯದಲ್ಲಿ ವಿಜ್ಞಾನಿಗಳು, ಸ್ವಾತಂತ್ರ್ಯಯೋಧರು, ದೇಶಭಕ್ತರು, ಕವಿಗಳು, ಕಲಾವಿದರು, ದಾರ್ಶನಿಕರು, ಸಮಾಜ ಸುಧಾರಕರು ಮುಂತಾದವರ ಕುರಿತಾದ ಕೃತಿಗಳು ಸೇರಿವೆ. ಇದಲ್ಲದೆ ಅವರ ಕಥಾ ಸಂಕಲನಗಳು, ನಾಟಕಗಳು ಮುಂತಾದ ಬರಹಗಳು ಕೂಡಾ ಅನೇಕವಿವೆ. ಹಿಪೊಕ್ರೆಟಿಸ್, ಗ್ಯಾಲನ್, ಜಗದೀಶ ಚಂದ್ರಬೋಸ್, ಯೂಕ್ಲಿಡ್, ಮಹೇಂದ್ರಲಾಲ್ ಸರ್ಕಾರ್, ಭಾರತೀಯ ವಿಜ್ಞಾನಿಗಳು, ಪಾಶ್ಚಾತ್ಯ ವಿಜ್ಞಾನಿಗಳು, ಸರ್ದಾರ್ ವಲ್ಲಭಾಯ್ ಪಟೇಲ್, ಸರೋಜಿನಿ ನಾಯಿಡು, ಸ್ವಾತಂತ್ರ್ಯದ ಕಿಡಿಗಳು, ಮುಂತಾದ ನೂರಾರು ಮಕ್ಕಳ ಕೃತಿಗಳನ್ನು ಅವರು ಬರೆದಿದ್ದಾರೆ. ಪ್ರೌಢರಿಗಾಗಿ ಸೂಕ್ತಿಗಳು, ಸುಭಾಷಿತಗಳು, ರಾಷ್ಟ್ರೀಯ ದಿನಾಚರಣೆಗಳು, ಪ್ರಬಂಧಗಳು, ನಿಘಂಟುಗಳು, ನಮ್ಮ ದೇವಾಲಯಗಳು, ಕರ್ನಾಟಕದ ವಾಸ್ತುಶಿಲ್ಪ, ಭಾರತದ ನದಿಗಳು, ಭೌಗೋಳಿಕದರ್ಶನ, ವಿಜ್ಞಾನ ಕೃತಿಗಳು, ಆರೋಗ್ಯ ಭಾಗ್ಯದ ಕೃತಿಗಳು, ಔಷಯ ಪುಸ್ತಿಕೆಗಳು, ವ್ಯಕ್ತಿ ಪರಿಚಯ ಕೃತಿಗಳು ಸೇರಿ ಅವರು ಬರೆದಿರುವ ಕೃತಿಗಳ ಸಂಖ್ಯೆ 500ರ ಸಮೀಪದ್ದು. ಇಂಗ್ಲಿಷ್‌ನಲ್ಲಿ ಪ್ರಕಟವಾಗಿರುವ ಅವರ ಕೃತಿಗಳೂ ನೂರಾರು. ಅವರ ಕೃತಿಗಳು ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ.

Books By Be Go Ramesh