Anu Belle

Anu Belle

ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಅನು ಬೆಳ್ಳೆ ಅವರು ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆಯವರಾಗಿದ್ದು ಹುಟ್ಟಿದ್ದು ತಮಿಳುನಾಡಿನ ಮಧುರೈನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಪಡುಬೆಳ್ಳೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಇನ್ನಂಜೆಯ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜ್ ನಲ್ಲಿ ಮುಗಿಸಿದ್ದರು. ಶಿರ್ವದ ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು.

ಕನ್ನಡದ ಬಹುತೇಕ ಪತ್ರಿಕಗಳಲ್ಲಿ ಇವರ ಕಥೆ, ಕಾದಂಬರಿಗಳು ಪ್ರಕಟಗೊಂಡಿವೆ. ಈವರೆಗೆ ಐವತ್ತು ಕೃತಿಗಳನ್ನು ರಚಿಸಿದ್ದಾರೆ. ಭೂತದ ಕೋಳಿ, ಬಿಳಿಕಾಗೆ, ಸುಡುಗಾಡ ಕಾಯ, ಕಥೆ ಇದಲ್ಲ ಮುಂತಾದ ಕಥಾಸಂಕಲನಗಳು. ನಿಲುವು, ಜಾಡು, ಕುಡ್ಪಲ್ ಭೂತ, ರಾಗದೀಪ, ಮರಳು ದಿಣ್ಣೆ, ರಣರಂಗ, ಚಕ್ರವ್ಯೂಹ ಮುಂತಾದ ಕಾದಂಬರಿಗಳನ್ನು ಬರೆದಿದ್ದಾರೆ. ಜೊತೆಗೆ ಕನ್ನಡದ ಬೇಟೆ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ ಅವರ ವ್ಯಕ್ತಿ ಚಿತ್ರಣ, ದೃಶ್ಯ ಮಾಧ್ಯಮದ ಬಗೆಗೆ ಶೂಟಿಂಗ್ ಶೂಟಿಂಗ್ ಎನ್ನುವ ಲೇಖನ ಸಂಗ್ರಹವನ್ನು ಹೊರ ತಂದಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಭಾಮಿನಿ ಕಥಾ ಪ್ರಶಸ್ತಿ, ಉತ್ಥಾನ ಕಥಾ ಪ್ರಶಸ್ತಿ, ಲೇಖಿಕಾಶ್ರೀ ಪ್ರಶಸ್ತಿ, ವರ್ಧಮಾನ ಉದಯೋನ್ಮಖ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.

ದೃಶ್ಯ ಮಾಧ್ಯಮದಲ್ಲಿ ಸಂಭಾಷಣಾಕಾರರಾಗಿ ಹಾಗೂ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕಾರ್ಕಳ ತಾಲೂಕಿನ ಕ್ರಿಯೇಟಿವ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಪತ್ಮಂದೇ’ ಕಾದಂಬರಿ ಇವರ ಐವತ್ತನೇ ಕೃತಿಯಾಗಿದೆ.

Books By Anu Belle