ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ಬರಹಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರರ ಚೊಚ್ಚಲ ಕೃತಿ ಬಹುಮಾನ, ಶ್ರೀ ಹೆಬ್ಬಗೋಡಿ ಗೋಪಾಲ್ ದತ್ತಿ ಪುರಸ್ಕಾರ, ಗುರುಕುಲ ಸಾಹಿತ್ಯ ಸೌರಭ ಪ್ರಶಸ್ತಿ, ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡುವ ರಾಜ್ಯ ಯುವ ರತ್ನ ಪ್ರಶಸ್ತಿ ಸೇರಿದಂತೆ ಬುಕ್ ಬ್ರಹ್ಮ ಕಥಾ ಹಾಗೂ ಕವನ ಬಹುಮಾನಗಳೂ ಸಂದಿವೆ. ಪ್ರಕಟಿತ ಕೃತಿಗಳು : ಋಣಭಾರ (ಕಥಾಸಂಕಲನ), ಮೂರನೆಯವಳು (ಕವನಸಂಕಲನ), ರೌದ್ರಾವರಣಂ (ಕಾದಂಬರಿ).