ಪ್ರೊ. ಎ. ವಿ. ನಾವಡ (ಏಪ್ರಿಲ್ ೨೮, ೧೯೪೬) ಕನ್ನಡನಾಡಿನ ಪ್ರಾಧ್ಯಾಪಕರಾಗಿ, ವಿದ್ವಾಂಸರಾಗಿ, ಭಾಷಾ ಶಾಸ್ತ್ರಜ್ಞರಾಗಿ ಮಹತ್ವದ ಕಾಯಕ ಮಾಡಿದವರಾಗಿದ್ದಾರೆ.
ಎ.ವಿ. ನಾವಡ ಅವರು ಏಪ್ರಿಲ್ ೨೮, ೧೯೪೬ರಂದು ಮಂಗಳೂರು ಸಮೀಪದ ಕೋಟೆಕಾರು ಎಂಬಲ್ಲಿ ಜನಿಸಿದರು. ತಂದೆ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ ಮತ್ತು ತಾಯಿ ಪಾರ್ವತಿ.ಪ್ರಾಥಮಿಕ ಶಿಕ್ಷಣವನ್ನು ಕೋಟೆಕಾರಿನ ಸ್ವೆಲ್ಲಾ ಮೇರಿಸ್ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ವ್ಯಾಸಂಗಮಾಡಿ, ಬಳಿಕ ಆನಂದಾಶ್ರಮದ ಶಾಲೆಯಲ್ಲಿ ನಡೆಸಿದ ನಾವಡರು ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನಲ್ಲಿ ಪದವಿಯನ್ನೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನೂ ಪಡೆದರು.
ನಾವಡರು ಉದ್ಯೋಗಕ್ಕಾಗಿ ಸೇರಿದ್ದು ಕುಂದಾಪುರದ ಭಂಡಾರ್‌ಕರ್ಸ್ ಕಾಲೇಜು. ೧೯೭೦ರಿಂದ-೯೪ರವರೆಗೆ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ೨೪ ವರ್ಷ ಸೇವೆ ಸಲ್ಲಿಸಿದರು.
೧೯೯೪ರಿಂದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಪುರಂದರದಾಸ ಅಧ್ಯಯನ ಪೀಠದ ಅಧ್ಯಕ್ಷರಾಗಿ, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧಕರಾಗಿ, ಉಡುಪಿಯ ಗೋವಿಂದಪೈ ಸಂಶೋಧನ ಕೇಂದ್ರದ ತುಳು ನಿಘಂಟು ಯೋಜನೆಯ ಮುಖ್ಯ ಸಂಪಾದಕರಾಗಿ ಸೇವೆ ಸಲಲ್ಲಿಸಿದ್ದಾರೆ.